ದ್ವಿತೀಯ ಏಕದಿನ: ದಕ್ಷಿಣ ಆಫ್ರಿಕಾಕ್ಕೆ ರೋಚಕ ಜಯ, ಬವುಮಾ ಶತಕ

Update: 2023-01-30 18:28 GMT

ಬ್ಲೋಮ್ಫೋಂಟೈನ್, ಜ.30: ದ್ವಿತೀಯ ಏಕದಿನ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡವನ್ನು 5 ವಿಕೆಟ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೆ 2-0 ಅಂತರದಿಂದ ಗೆದ್ದುಕೊಂಡಿದೆ.

ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 343 ರನ್ ಬೆನ್ನಟ್ಟಿದ ಹರಿಣ ಪಡೆ ನಾಯಕ ಟೆಂಬಾ ಬವುಮಾ ಸಿಡಿಸಿದ 3ನೇ ಶತಕದ (109 ರನ್, 102 ಎಸೆತ, 14 ಬೌಂಡರಿ, 1 ಸಿಕ್ಸರ್) ಬಲದಿಂದ 49.1ನೇ ಓವರ್ನಲ್ಲಿ 5 ವಿಕೆಟ್ಗಳ ನಷ್ಟಕ್ಕೆ 347 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಡೇವಿಡ್ ಮಿಲ್ಲರ್ ಔಟಾಗದೆ 58 ರನ್(37 ಎಸೆತ) ,ಮರ್ಕ್ರಮ್ 49 ರನ್(43 ಎಸೆತ) ಹಾಗೂ ಮಾರ್ಕೊ ಜಾನ್ಸನ್(ಔಟಾಗದೆ 32, 29 ಎಸೆತ) ಗೆಲುವಿಗೆ ನೆರವಾದರು.

ಮೊದಲ ವಿಕೆಟಿಗೆ 77 ರನ್ ಗಳಿಸಿದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್(31 ರನ್),ರಾಸಿ ವಾನ್ಡರ್ ಡುಸನ್(38 ರನ್) ಕೂಡ ಜವಾಬ್ದಾರಿಯುತವಾಗಿ ಆಡಿದರು. ಇದಕ್ಕೂ ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡ ನಾಯಕ ಜೋಸ್ ಬಟ್ಲರ್(ಔಟಾಗದೆ 94 ರನ್, 81 ಎಸೆತ), ಹ್ಯಾರಿ ಬ್ರೂಕ್ (80 ರನ್, 75 ಎಸೆತ)ಹಾಗೂ ಮೊಯಿನ್ ಅಲಿ(51 ರನ್,44 ಎಸೆತ)ನೀಡಿದ ಅರ್ಧಶತಕದ ಕೊಡುಗೆಯ ನೆರವಿನಿಂದ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 342 ರನ್ ಗಳಿಸಿತು. ದ.ಆಫ್ರಿಕಾದ ಪರ ಅನ್ರಿಚ್ ನಾರ್ಟ್ಜೆ 2 ವಿಕೆಟ್ ಪಡೆದರು. ಸರಿಯಾದ ಸಮಯಕ್ಕೆ ಮೊದಲಿನ ಲಯಕ್ಕೆ ಮರಳಿದ ನಾಯಕ ಬವುಮಾ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು.

Similar News