ಹಾಕಿ ವಿಶ್ವಕಪ್ ನಲ್ಲಿ ಭಾರತದ ಕಳಪೆ ಪ್ರದರ್ಶನ: ಮುಖ್ಯ ಕೋಚ್ ಹುದ್ದೆ ತ್ಯಜಿಸಿದ ಗ್ರಹಾಂ ರೀಡ್

Update: 2023-01-30 18:35 GMT

ಹೊಸದಿಲ್ಲಿ, ಜ.30: ಭುವನೇಶ್ವರದಲ್ಲಿ ರವಿವಾರ ಕೊನೆಗೊಂಡಿರುವ ಹಾಕಿ ವಿಶ್ವಕಪ್ ನಲ್ಲಿ ಭಾರತದ ಪುರುಷರ ಹಾಕಿ ತಂಡ ಕಳಪೆ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಹಾಕಿ ತಂಡದ ಪ್ರಧಾನ ಕೋಚ್ ಗ್ರಹಾಂ ರೀಡ್ ಸೋಮವಾರ ತನ್ನ ಹುದ್ದೆಯನ್ನು ತ್ಯಜಿಸಿದ್ದಾರೆ.

ಕ್ವಾರ್ಟರ್ ಫೈನಲ್ ಹಂತ ತಲುಪುವಲ್ಲಿ ವಿಫಲವಾಗಿದ್ದ ಭಾರತವು ಅರ್ಜೆಂಟೀನದೊಂದಿಗೆ ಜಂಟಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಆಸ್ಟ್ರೇಲಿಯದ 58ರ ವಯಸ್ಸಿನ ರೀಡ್ 2019ರ ಎಪ್ರಿಲ್ನಲ್ಲಿ ಭಾರತದ ಕೋಚ್ ಆಗಿ ನೇಮಕಗೊಂಡಿದ್ದರು. ಇವರ ಮಾರ್ಗದರ್ಶನದಲ್ಲಿ ಭಾರತವು 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿತ್ತು.

2022ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತವು ಬೆಳ್ಳಿ ಪದಕ ಗೆದ್ದಾಗ ಹಾಗೂ 2021-22ರ ಎಫ್ಐಎಚ್ ಹಾಕಿ ಪ್ರೊ ಲೀಗ್ ಋತುವಿನಲ್ಲಿ ಮೂರನೇ ಸ್ಥಾನ ಪಡೆದಾಗ ರೀಡ್ ಹಾಗೂ ಅವರ ಸಹಾಯಕ ಸಿಬ್ಬಂದಿ ತಂಡದೊಂದಿಗಿದ್ದರು. ‘‘ತಂಡದ ವಿಶ್ಲೇಷಣಾತ್ಮಕ ತರಬೇತುದಾರ ಗ್ರೆಗ್ ಕ್ಲಾರ್ಕ್ ಹಾಗೂ ವೈಜ್ಞಾನಿಕ ಸಲಹೆಗಾರ ಮಿಚೆಲ್ ಡೇವಿಡ್ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮೂವರೂ ಮುಂದಿನ ತಿಂಗಳು ತಮ್ಮ ನೋಟಿಸ್ ಅವಧಿ ಪೂರೈಸಲಿದ್ದಾರೆ’’ ಎಂದು ಹಾಕಿ ಇಂಡಿಯಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.
 
‘‘ನಾವು ಬಯಸಿದಂತಹ ಫಲಿತಾಂಶ ಇದಾಗಿರಲಿಲ್ಲ. ನಾನು ಇದಕ್ಕಿಂತ ಹೆಚ್ಚು ಮಾತನಾಡುವುದಿಲ್ಲ’ ಎಂದು ಟೀಮ್ ಇಂಡಿಯಾದ ವಿಶ್ಲೇಷಣಾತ್ಮಕ ಕೋಚ್ ಕ್ಲಾರ್ಕ್ ಹೇಳಿದ್ದಾರೆ. ಜರ್ಮನಿಯು ಬೆಲ್ಜಿಯಮ್ ತಂಡವನ್ನು ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಮರುದಿನವೇ ರೀಡ್ ಅವರು ಹಾಕಿ ಇಂಡಿಯಾದ ಅಧ್ಯಕ್ಷ ದಿಲಿಪ್ ಟಿರ್ಕಿಗೆ ತನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

Similar News