ಮ್ಯಾನ್ಮಾರ್ ಗೆ ಚೀನಾದ ವಿಸ್ತೃತ ರಾಜತಾಂತ್ರಿಕ, ಮಿಲಿಟರಿ ಬೆಂಬಲ: ವರದಿ

Update: 2023-02-01 15:20 GMT

ಬೀಜಿಂಗ್, ಫೆ.1: ನಾಗರಿಕರ ತೀವ್ರ ಪ್ರತಿರೋಧದ ಹೊರತಾಗಿಯೂ ಮ್ಯಾನ್ಮಾರ್ ನ ಮೇಲೆ ಸೇನಾಡಳಿತದ ನಿಯಂತ್ರಣ ಇನ್ನೂ ಮುಂದುವರಿದಿದ್ದು ಸೇನಾ ಮುಖಂಡರಿಗೆ ಚೀನಾದಿಂದ ವಿಸ್ತೃತ ರಾಜತಾಂತ್ರಿಕ ಮತ್ತು ಮಿಲಿಟರಿ ಬೆಂಬಲ ದೊರಕುತ್ತಿದೆ ಎಂದು ಯುರೋಪ್ ಏಶ್ಯಾ ಫೌಂಡೇಷನ್ ವರದಿ ಮಾಡಿದೆ.

2 ವರ್ಷದ ಹಿಂದೆ ಮ್ಯಾನ್ಮಾರ್‌ನಲ್ಲಿ ಪ್ರಜಾಸ್ತಾತ್ಮಕ ಸರಕಾರವನ್ನು ಪದಚ್ಯುತಗೊಳಿಸಿ ಸೇನೆ ಆಡಳಿತವನ್ನು ಕೈಗೆತ್ತಿಕೊಂಡ ಬಳಿಕ ಪ್ರಮುಖ ಮುಖಂಡರಾದ ಆಂಗ್ಸಾನ್ ಸೂಕಿ, ಮಾಜಿ ಅಧ್ಯಕ್ಷ ವಿನ್ ಮಿಂಟ್(Win Myint) ಸಹಿತ ಹಲವರನ್ನು ಬಂಧನದಲ್ಲಿಡಲಾಗಿದೆ. ಇದನ್ನು ವಿರೋಧಿಸಿ ದೇಶದಾದ್ಯಂತ ನಡೆದಿರುವ ಪ್ರತಿಭಟನೆಯಲ್ಲಿ ಸಮಾಜದ ಎಲ್ಲಾ ವರ್ಗದವರೂ ಪಾಲ್ಗೊಂಡಿದ್ದಾರೆ. ಕ್ರಮೇಣ  ಈ ಪ್ರತಿಭಟನೆಯು ಸೇನೆಯ ವಿರುದ್ಧದ ಸಶಸ್ತ್ರ ಹೋರಾಟದ ರೂಪು ತಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಚೀನಾದ ಬೆಂಬಲವು ಮ್ಯಾನ್ಮಾರ್ ಸೇನಾಡಳಿತಕ್ಕೆ ಸಂಜೀವಿನಿಯಂತೆ ಒದಗಿಬಂದಿದೆ ಎಂದು ವರದಿ ಹೇಳಿದೆ.

ಸೇನೆಯ ದಂಗೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಚೀನಾದ ಸರಕಾರಿ ಸ್ವಾಮ್ಯದ ಮಾಧ್ಯಮಗಳು `ಮ್ಯಾನ್ಮಾರ್ ಲ್ಲಿನ ಬೆಳವಣಿಗೆಗಳು ಸಂಪುಟದ ಪುನರ್ರಚನೆ ಪ್ರಕ್ರಿಯೆಯಾಗಿದೆ. 11 ಕ್ಯಾಬಿನೆಟ್ ಸಚಿವರ ಸ್ಥಾನದಲ್ಲಿ ಹೊಸ ಕೇಂದ್ರ ಸಚಿವರನ್ನು ನೇಮಿಸಲಾಗಿದ್ದು 24 ಸಹಾಯಕ ಸಚಿವರನ್ನು ವಜಾಗೊಳಿಸಲಾಗಿದೆ' ಎಂದು ವರದಿ ಮಾಡಿದ್ದವು. ಇದು ಮ್ಯಾನ್ಮಾರ್ನ ರಾಜಕೀಯ ಬೆಳವಣಿಗೆಳಲ್ಲಿ ಚೀನಾದ ಹಿತಾಸಕ್ತಿಗಳ ಬಗ್ಗೆ ಸೂಕ್ಷ್ಮ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ವರದಿ ಹೇಳಿದೆ.

2021ರ ಎಪ್ರಿಲ್ ನಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ `ಮ್ಯಾನ್ಮಾರ್ ಆಂತರಿಕ ವ್ಯವಹಾರದಲ್ಲಿ ಬಾಹ್ಯ ಹಸ್ತಕ್ಷೇಪದಿಂದ ದೂರ ಇರುವಂತೆ ಮತ್ತು ಮ್ಯಾನ್ಮಾರ್ ನ ಬೆಳವಣಿಗೆ ಬಗ್ಗೆ ಮೃದು ನೀತಿ ಅನುಸರಿಸುವಂತೆ ಆಸಿಯಾನ್ ದೇಶಗಳನ್ನು ಆಗ್ರಹಿಸಿದ್ದರು . 2021ರ ಡಿಸೆಂಬರ್ನಲ್ಲಿ ಚೀನಾವು ಮ್ಯಾನ್ಮಾರ್ಗೆ `ಮಿಂಗ್-ಕ್ಲಾಸ್' ಡೀಸೆಲ್-ಇಲೆಕ್ಟ್ರಿಕ್ ಸಬ್ಮೆರೀನ್ ಅನ್ನು ಒದಗಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Similar News