ಇಸ್ರೇಲ್ ನಿಂದ ಡ್ರೋನ್ ದಾಳಿ; ಇರಾನ್ ಪ್ರತೀಕಾರ ಕ್ರಮದ ಎಚ್ಚರಿಕೆ

Update: 2023-02-03 17:52 GMT

ಟೆಹ್ರಾನ್, ಫೆ.3: ಕಳೆದ ವಾರ ಇರಾನ್ ನ ಇಸ್ಫಹಾನ್ ನಗರದಲ್ಲಿನ ಮಿಲಿಟರಿ ಕಾರ್ಯಾಲವನ್ನು ಉದ್ದೇಶಿಸಿ ನಡೆದ ಡ್ರೋನ್ ದಾಳಿ ಇಸ್ರೇಲ್ ನ ಕೃತ್ಯ ಎಂದು ದೂಷಿಸಿರುವ ಇರಾನ್, ಇದಕ್ಕೆ ಸೂಕ್ತ ಪ್ರತೀಕಾರ ತೀರಿಸಿಕೊಳ್ಳುವ ಕಾನೂನುಬದ್ಧ ಮತ್ತು ಅಂತರ್ಗತ ಹಕ್ಕನ್ನು ಕಾಯ್ದಿರಿಸಿರುವುದಾಗಿ ಎಚ್ಚರಿಸಿದೆ.

ಈ ಆಕ್ರಮಣಕಾರಿ ಪ್ರಯತ್ನಕ್ಕೆ ಇಸ್ರೇಲಿ ಆಡಳಿತ ಕಾರಣವಾಗಿದೆ ಎಂದು ಆರಂಭಿಕ ತನಿಖೆಗಳು ಸೂಚಿಸುತ್ತವೆ ಎಂದು ವಿಶ್ವಸಂಸ್ಥೆಯಲ್ಲಿನ ಇರಾನ್ ನ ನಿಯೋಗ ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸಿದ, ವಿಶ್ವಸಂಸ್ಥೆಗೆ ಇರಾನ್ ರಾಯಭಾರಿ ಅಮೀರ್ ಸಯೀದ್ ಇರಾವಾನಿ ಸಹಿ ಹಾಕಿರುವ  ಪತ್ರದಲ್ಲಿ ಉಲ್ಲೇಖಿಸಿದೆ. ಆದರೆ ಈ ಆರೋಪಕ್ಕೆ ಪುರಾವೆಯನ್ನು ಸೂಚಿಸಿಲ್ಲ. ಇರಾನ್ ನ ಹೇಳಿಕೆಗೆ ಇಸ್ರೇಲ್ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಜನವರಿ 28ರಂದು ರಾತ್ರಿ 11:30ರ ವೇಳೆಗೆ ಇಸ್ಫಹಾನ್ ನ ಮಿಲಿಟರಿ ಕಾರ್ಯಾಲಯದ ಮೇಲೆ 3 ಡ್ರೋನ್ ಗಳು ದಾಳಿ ನಡೆಸಿದ್ದವು, ಇದರಲ್ಲಿ ಎರಡನ್ನು ಹೊಡೆದುರುಳಿಸಲಾಗಿತ್ತು. ಆದರೆ ಮೂರನೇ ಡ್ರೋನ್ ತಡೆಯನ್ನು ನಿವಾರಿಸಿಕೊಂಡು ಮುನ್ನುಗ್ಗಿ ಕಾರ್ಯಾಲಯದ ಕಟ್ಟಡಕ್ಕೆ ಅಪ್ಪಳಿಸಿದ್ದು ಕಟ್ಟಡಕ್ಕೆ ಅಲ್ಪಪ್ರಮಾಣದಲ್ಲಿ ಹಾನಿಯಾಗಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ. ಬಾಂಬ್ಲೆಟ್ ಗಳನ್ನು ಹೊಂದಿರುವ ಕ್ವಾಡ್ಕಾಪ್ಟರ್ಗಳನ್ನು ಬಳಸಿ ಈ ದಾಳಿ ನಡೆಸಲಾಗಿದೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳನ್ನು ಉಲ್ಲೇಖಿಸಿ ಇರಾನ್ ಸರಕಾರಿ ಸ್ವಾಮ್ಯದ ಇರ್ನಾ ಸುದ್ಧಿಸಂಸ್ಥೆ ವರದಿ ಮಾಡಿತ್ತು. ನಾಲ್ಕು ರೆಕ್ಕೆಗಳನ್ನು ಹೊಂದಿರುವ, ರಿಮೋಟ್ ನಿಯಂತ್ರಣ ವ್ಯವಸ್ಥೆ ಹೊಂದಿರುವ ಡ್ರೋನ್ಗಳನ್ನು ಕ್ವಾಡ್ಕಾಪ್ಟರ್ ಎಂದು ಕರೆಯಲಾಗುತ್ತದೆ.

ಈ ದಾಳಿಗೆ ಇಸ್ರೇಲ್ ಹೊಣೆ ಎಂದು ಆರೋಪಿಸಿ ಅಮೀರ್ ಸಯೀದ್ ಇರಾವಾನಿ ವಿಶ್ವಸಂಸ್ಥೆಯ ಪ್ರಧಾನಿ ಕಾರ್ಯದರ್ಶಿ ಗುಟೆರಸ್ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಬರೆದಿರುವ ಪತ್ರದಲ್ಲಿ `ತನ್ನ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಮತ್ತು ಇಸ್ರೇಲಿ ಆಡಳಿತದಿಂದ ಯಾವುದೇ ಬೆದರಿಕೆ ಅಥವಾ ತಪ್ಪು ಕ್ರಮಗಳಿಗೆ ದೃಢವಾಗಿ ಪ್ರತಿಕ್ರಿಯಿಸುವ ಕಾನೂನುಬದ್ಧ ಮತ್ತು ಅಂತರ್ಗತ ಹಕ್ಕನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಕಾಯ್ದಿರಿಸಿದೆ' ಎಂದು ಉಲ್ಲೇಖಿಸಲಾಗಿದೆ.

ಈ ಪತ್ರದ ಜತೆ ಉಕ್ರೇನ್ ನ ಅಧ್ಯಕ್ಷರ ಸಲಹೆಗಾರ ಮಿಖಾಯಿಲೊ ಪೊಡೊಲ್ಯಾಕ್ ಡ್ರೋನ್ ದಾಳಿಯ ಬಳಿಕ ಮಾಡಿದ್ದ ಟ್ವೀಟ್ ನ ಬಗ್ಗೆಯೂ ದೂರು ನೀಡಲಾಗಿದೆ(ಇರಾನ್ ನಲ್ಲಿ ಸ್ಫೋಟಕ ರಾತ್ರಿಗಳು.. ಉಕ್ರೇನ್ ನಿಮಗೆ ಎಚ್ಚರಿಕೆ ನೀಡಿತ್ತು ಎಂಬ ಟ್ವೀಟ್). ರಶ್ಯಕ್ಕೆ ಇರಾನ್ ಒದಗಿಸುವ ಬಾಂಬ್ ಹೊತ್ತೊಯ್ಯವ ಡ್ರೋನ್ ಗಳನ್ನು ರಶ್ಯವು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಬಳಸುತ್ತಿದೆ ಎಂದು ಉಕ್ರೇನ್ ಆರೋಪಿಸುತ್ತಿದೆ.

ಇಸ್ರೇಲ್ ಸೇನೆಯ ಗುಪ್ತಚರ ಘಟಕ ಮೊಸಾದ್ ನಡೆಸುವ ಯಾವುದೇ ಕಾರ್ಯಾಚರಣೆಯ ಬಗ್ಗೆ  ಇಸ್ರೇಲ್ ಅಧಿಕಾರಿಗಳು ಹೆಚ್ಚಿನ ಸಂದರ್ಭದಲ್ಲಿ ಪ್ರತಿಕ್ರಿಯಿಸುವುದಿಲ್ಲ. ಆದರೆ, ಇತ್ತೀಚೆಗಷ್ಟೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಬೆಂಜಮಿನ್ ನೆತನ್ಯಾಹು `ಇರಾನ್ ನಮ್ಮ ದೇಶಕ್ಕೆ  ಎದುರಾಗಿರುವ ಅತೀ ದೊಡ್ಡ ಬೆದರಿಕೆ' ಎಂದು ಹೇಳಿಕೆ ನೀಡಿದ್ದರು.

ಉಪಗ್ರಹ ಚಿತ್ರಗಳಿಂದ ಹಾನಿಯ ಪ್ರಮಾಣದ ಮಾಹಿತಿ

ಪ್ಲಾನೆಟ್ ಲ್ಯಾಬ್ ಸಂಗ್ರಹಿಸಿದ ಉಪಗ್ರಹ ಚಿತ್ರದಲ್ಲಿ ಇಸ್ಫಹಾನ್ ನ್ ಮಿಲಿಟರಿ ಕಾರ್ಯಾಲಯಕ್ಕೆ  ಆಗಿರುವ ಹಾನಿಯನ್ನು ಅಂದಾಜಿಸಬಹುದಾಗಿದೆ. ಟೆಹ್ರಾನ್ನ ದಕ್ಷಿಣಕ್ಕೆ ಸುಮಾರು 350 ಕಿ.ಮೀ ದೂರದ ಈ ಕಾರ್ಯಾಲಯದ  ಛಾವಣಿಯಲ್ಲಿ 2 ಕಡೆ ದೊಡ್ಡ ರಂಧ್ರವಾಗಿದೆ. ಶಸ್ತ್ರಸಜ್ಜಿತ ವಾಹನಗಳು ಅಥವಾ ಛಾವಣಿಯ ಸುತ್ತ ಪಂಜರದಂತಹ ರಚನೆ ಇರುವುದು ಸ್ಪಷ್ಟವಾಗಿ ಕಾಣುತ್ತದೆ. ರಾಕೆಟ್ ಗಳು, ಕ್ಷಿಪಣಿಗಳು ಅಥವಾ ಬಾಂಬ್ ಹೊತ್ತೊಯ್ಯುವ ಡ್ರೋನ್ಗಳ ನೇರ ದಾಳಿಯಿಂದ ಕಟ್ಟಡವನ್ನು ರಕ್ಷಿಸಲು ಈ ವ್ಯವಸ್ಥೆ  ಮಾಡಲಾಗಿದೆ.

ಇಸ್ಫಹಾನ್ ಮಿಲಿಟರಿ ಕಾರ್ಯಾಲಯದ ಮೇಲೆ ದಾಳಿ ನಡೆಸುವ ಷಡ್ಯಂತ್ರವನ್ನು ಕಳೆದ ಜುಲೈಯಲ್ಲಿ ವಿಫಲಗೊಳಿಸಲಾಗಿತ್ತು ಎಂದು ಇರಾನ್ನ ಟಿವಿ ವಾಹಿನಿ ವರದಿ ಮಾಡಿದೆ.

Similar News