ರ್‍ಯಾಪ್ ಪ್ರದರ್ಶನದ ಆಕಾಂಕ್ಷಿಗಳಾಗಿದ್ದ ಮೂವರು ವಾರಗಳ ನಾಪತ್ತೆಯ ನಂತರ ಶವವಾಗಿ ಪತ್ತೆ

Update: 2023-02-04 08:59 GMT

ಡೆಟ್ರಾಯಿಟ್: ಎರಡು ವಾರಗಳ ಕಾಲ ನಾಪತ್ತೆಯಾಗಿದ್ದ ಮೂವರು ರ್‍ಯಾಪರ್ ಗಳು (rappers), ಡೆಟ್ರಾಯಿಟ್‌ ಪ್ರದೇಶದ ವಸತಿ ಸಮುಚ್ಚಯವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ ಎಂದು billboard.com ವರದಿ ಮಾಡಿದೆ.

ಈ ಕುರಿತು ಶುಕ್ರವಾರ ಮಧ್ಯಾಹ್ನ ಟ್ವೀಟ್ ಮಾಡಿರುವ ಮಿಚಿಗನ್ ರಾಜ್ಯ ಪೊಲೀಸರು, ಮೃತರನ್ನು ಮಿಚಿಗನ್‌ನ ಆಸ್ಕೋಡಾದ ನಿವಾಸಿ ಅರ್ಮಾನಿ ಕೆಲ್ಲಿ (27), ಡೆಟ್ರಾಯಿಟ್ ನಿವಾಸಿ ಮೋಂಟೋಯಾ ಗಿವನ್ಸ್ (31) ಹಾಗೂ ಮಿಚಿಗನ್‌ನ ಮೆಲ್ವಿನ್ಡೇಲ್‌ನ ನಿವಾಸಿ ಡಾಂಟೆ ವಿಕರ್ (31) ಎಂದು ತನಿಖಾಧಿಕಾರಿಗಳು ಗುರುತಿಸಿದ್ದಾರೆ ಎಂದು ಹೇಳಿದೆ.

"ಅವರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ನಮ್ಮ ಸಂತಾಪ ಸೂಚಿಸುತ್ತೇವೆ" ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 21ರಂದು ಈ ಮೂವರು ಡೆಟ್ರಾಯಿಟ್‌ನ ಲಾಂಜ್ 31ರಲ್ಲಿ ಆಯೋಜಿಸಲಾಗಿದ್ದ ಸಂತೋಷ ಕೂಟದಲ್ಲಿ ತಮ್ಮ ಪ್ರದರ್ಶನ ನೀಡಬೇಕಿತ್ತು. ಆದರೆ, ಆ ಸಂತೋಷ ಕೂಟ ರದ್ದಾದ ನಂತರ ಈ ಮೂವರೂ ನಾಪತ್ತೆಯಾಗಿದ್ದರು. ನಂತರ ಗುರುವಾರ ಡೆಟ್ರಾಯಿಟ್‌ನಲ್ಲಿನ ಹೈಲ್ಯಾಂಡ್ ಪಾರ್ಕ್‌ನಲ್ಲಿರುವ ಇಲಿಗಳಿಂದ ಪೀಡಿತವಾಗಿರುವ ವಸತಿ ಸಮುಚ್ಚಯದ ತಳ ಮಹಡಿಯಲ್ಲಿ ಅವರ ದೇಹಗಳು ಅನಾಥ ಸ್ಥಿತಿಯಲ್ಲಿ ದೊರೆತಿದ್ದವು.

ಈ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ವೇನ್ ಕೌಂಟಿ ವೈದ್ಯಕೀಯ ಪರೀಕ್ಷಕರು ನಡೆಸಲಿದ್ದಾರೆ. ಮೃತದೇಹಗಳು ತೀವ್ರ ತಣ್ಣನೆಯ ಸ್ಥಿತಿಯಲ್ಲಿ ದೊರೆತಿರುವುದರಿಂದ ಮರಣೋತ್ತರ ಪರೀಕ್ಷಾ ವರದಿ ದೊರೆಯಲು ಕನಿಷ್ಠ ಪಕ್ಷ 48 ಗಂಟೆಗಳಾಗುತ್ತದೆ ಎಂದು ರಾಜ್ಯ ಪೊಲೀಸ್ ಇಲಾಖೆಯ ಲೆಫ್ಟಿನೆಂಟ್ ಮೈಕ್ ಶಾ ತಿಳಿಸಿದ್ದಾರೆ.

ರಾಜ್ಯ ಪರಿವರ್ತನಾ ಇಲಾಖೆಯ ಪ್ರಕಾರ, ಕೆಲ್ಲಿ, ಗಿವನ್ಸ್ ಹಾಗೂ ವಿಕರ್ ಜೈಲಿನಲ್ಲಿ ಭೇಟಿಯಾಗಿದ್ದರು. ಈ ಪೈಕಿ ಕೆಲ್ಲಿ ಮತ್ತು ಗಿವನ್ಸ್ ನಾಪತ್ತೆಯಾಗುವ ಮುನ್ನ ಪರೋಲ್ ಮೇಲಿದ್ದರು ಎಂದು ತಿಳಿಸಿದೆ.

ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಕಾರು ಅಪಘಾತ: ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಮೃತ್ಯು

Similar News