ಉಗ್ರರನ್ನು ನಿಗ್ರಹಿಸುವಂತೆ ತಾಲಿಬಾನ್ ಗೆ ಪಾಕ್ ಮನವಿ

Update: 2023-02-04 17:02 GMT

ಇಸ್ಲಮಾಬಾದ್, ಫೆ.4: ಪೇಷಾವರದ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಬಳಿಕ, ಭಯೋತ್ಪಾಕರನ್ನು ನಿಗ್ರಹಿಸುವಂತೆ  ಅಫ್ಘಾನಿಸ್ತಾನದ ತಾಲಿಬಾನ್ ನ ಸರ್ವೋಚ್ಛ ಮುಖಂಡರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ತಮ್ಮ ನೆಲವನ್ನು  ಪಾಕ್ ವಿರುದ್ಧದ ಭಯೋತ್ಪಾದನೆಗೆ ಬಳಸದಂತೆ ಕ್ರಮ ಕೈಗೊಳ್ಳಬೇಕೆಂದು ಕೋರಲು ವಿಶೇಷ ನಿಯೋಗವನ್ನು ಇರಾನ್ ಮತ್ತು ಅಫ್ಘಾನಿಸ್ತಾನಕ್ಕೆ ರವಾನಿಸಲಾಗುವುದು ಎಂದು ಪಾಕ್ ಪ್ರಧಾನಿ ಶಹಬಾಝ್ ಶರೀಫ್ ಅವರ ವಿಶೇಷ ಸಹಾಯಕ ಫೈಸಲ್ ಕರೀಮ್ ಕುಂದಿ ಹೇಳಿದ್ದಾರೆ. ಅಫ್ಘಾನ್ಗೆ ತೆರಳಲಿರುವ ಪಾಕ್ ನಿಯೋಗ ಅಫ್ಘಾನ್ ತಾಲಿಬಾನ್ ನ ಪರಮೋಚ್ಛ ಮುಖಂಡ ಹಿಬತುಲ್ಲಾ ಅಖುಂದ್ಝದ ಜತೆ ಮಾತುಕತೆ ನಡೆಸಲಿದೆ ಎಂದು ಪಾಕಿಸ್ತಾನದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ, ಬುಧವಾರ ಮಾಧ್ಯಮದವರ ಜತೆ ಮಾತನಾಡಿದ್ದ ಅಫ್ಘಾನ್ನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ `ಪಾಕಿಸ್ತಾನ ಮೊದಲು ತನ್ನ ಮನೆಯನ್ನು ಸುಸ್ಥಿತಿಯಲ್ಲಿಡಲಿ. ಅದು ಬಿಟ್ಟು ಇತರರನ್ನು ದೂಷಿಸುವುದು ಸರಿಯಲ್ಲ' ಎಂದು ಎಚ್ಚರಿಸಿದ್ದಾರೆ.

Similar News