ಪಾಕ್‌ನಲ್ಲಿ ಏಶ್ಯಕಪ್ ಆಯೋಜಿಸದಿದ್ದರೆ ವಿಶ್ವಕಪ್‌ನಲ್ಲಿ ಭಾಗವಹಿಸುವುದಿಲ್ಲ: ಪಿಸಿಬಿ

Update: 2023-02-05 18:16 GMT

ಹೊಸದಿಲ್ಲಿ,ಫೆ.5: ಏಶ್ಯಕಪ್ ಕ್ರಿಕೆಟ್ ಟೂರ್ನಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಬೇಕು. ಇಲ್ಲವಾದರೆ ಭಾರತದಲ್ಲಿ ನಡೆಯುವ 2023ರ ಐಸಿಸಿ ಏಕದಿನ ವಿಶ್ವಪ್ ಟೂರ್ನಿಯನ್ನು ಬಹಿಷ್ಕರಿಸಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಬೆದರಿಕೆ ಹಾಕಿರುವುದಾಗಿ ಮೂಲಗಳು ತಿಳಿಸಿವೆ.
ಏಶ್ಯಕಪ್ ಕ್ರಿಕೆಟ್ ಟೂರ್ನಿ ಈ ಬಾರಿ 50 ಓವರ್‌ಗಳ ಮಾದರಿಯಲ್ಲಿ ನಡೆಯಲಿದ್ದು, ಇದೇ ವರ್ಷದ ಸೆಪ್ಟಂಬರ್‌ನಲ್ಲಿ ಆಯೋಜಿಸಲಾಗುವುದು ಎಂದು ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ತಿಳಿಸಿದೆ. ಆದರೆ ಟೂರ್ನಿಯ ವೇಳಾಪಟ್ಟಿ ಹಾಗೂ ಆತಿಥ್ಯವಹಿಸುವ ದೇಶದ ಬಗ್ಗೆ ಮಾರ್ಚ್‌ನಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಎಸಿಸಿ ತಿಳಿಸಿದೆ.
ಈ ಬಾರಿಯ ಟೂರ್ನಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಬೇಕು. ಆದರೆ ಪಾಕ್‌ನಲ್ಲಿ ಟೂರ್ನಿ ನಡೆಸಿದರೆ, ಭದ್ರತಾ ಕಾರಣಗಳಿಂದಾಗಿ ತಮ್ಮ ತಂಡವನ್ನು ಅಲ್ಲಿಗೆ ಕಳುಹಿಸುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಿಳಿಸಿದೆ.
ಬಿಸಿಸಿಐ ನಿಲುವನ್ನು ಪಿಸಿಬಿ ಮಾಜಿ ಅಧ್ಯಕ್ಷ ರಮೀಝ್ ರಾಜಾ ಟೀಕಿಸಿದ್ದು, ಈ ವರ್ಷ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.
ಏಶ್ಯಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಅರ್ಹತಾ ಹಂತದಲ್ಲಿ ಗೆದ್ದುಬರುವ ಒಂದು ತಂಡ ಸೇರಿದಂತೆ ಒಟ್ಟು 6 ತಂಡಗಳು ಭಾಗವಹಿಸಲಿವೆ.
ಕಳೆದ ವರ್ಷ ಏಶ್ಯಕಪ್ ಟೂರ್ನಿ ಯುಎಇನಲ್ಲಿ ನಡೆದಿದ್ದು, ಈ ಬಾರಿ ಯುಎಇ ಮತ್ತೆ ಆತಿಥ್ಯವಹಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ.

Similar News