ಏಶ್ಯಕಪ್ ಆಡಲು ಪಾಕಿಸ್ತಾನಕ್ಕೆ ತೆರಳುವುದಿಲ್ಲ: ಬಿಸಿಸಿಐ ಮತ್ತೊಮ್ಮೆ ಸ್ಪಷ್ಟನೆ

Update: 2023-02-05 18:26 GMT

ಹೊಸದಿಲ್ಲಿ,ಫೆ.5: ಮುಂಬರುವ ಏಶ್ಯಕಪ್‌ನಲ್ಲಿ ಆಡಲು ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ತೆರಳದಿರುವ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತೊಮ್ಮೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಬಹರೈನ್‌ನಲ್ಲಿ ಶನಿವಾರ ನಡೆದ ಏಶ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಉತ್ಸುಕವಾಗಿಲ್ಲ ಎಂದು ಪುನರುಚ್ಚರಿಸಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಶ್ಯ ಕಪ್ ಅನ್ನು ಆಯೋಜಿಸಲು ನಿರ್ಧರಿಸಿದೆ, ಆದಾಗ್ಯೂ, ಎಸಿಸಿ ಕಾರ್ಯಕಾರಿ ಮಂಡಳಿಯು ಏಶ್ಯ ಕಪ್‌ಗೆ ಆತಿಥ್ಯ ವಹಿಸುವ ದೇಶದ ಬಗ್ಗೆ ನಿರ್ಧಾರ ತೆಗೆದುಕೊಳ್ಳದಿರಲು ನಿರ್ಧರಿಸಿದೆ. ಮುಂದಿನ ತಿಂಗಳು ಮಾರ್ಚ್‌ನಲ್ಲಿ ಸಮಿತಿಯು ಮತ್ತೆ ಸಭೆ ಸೇರಿದಾಗ ಆತಿಥೇಯ ತಂಡ ಹಾಗೂ ಸ್ಥಳದ ಕುರಿತು ಎಸಿಸಿ ಚರ್ಚಿಸುತ್ತದೆ.

ಎಸಿಸಿ ಅಧ್ಯಕ್ಷರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಹಿಂದೆ ಬಿಸಿಸಿಐ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

Similar News