ಟರ್ಕಿಯಲ್ಲಿ ಭಾರಿ ಭೂಕಂಪ: ಇಬ್ಭಾಗವಾದ ವಿಮಾನ ರನ್‌ವೇ

Update: 2023-02-07 08:15 GMT

ಇಸ್ತಾಂಬುಲ್: ಟರ್ಕಿ ಮತ್ತು ಸಿರಿಯಾ ದೇಶಗಳಲ್ಲಿ ಮೂರು ಪ್ರಬಲ ಭೂಕಂಪ ಸಂಭವಿಸಿದ್ದು, ಇದರಿಂದ ಭಾರಿ ಪ್ರಮಾಣದ ಮೂಲಸೌಕರ್ಯ ಹಾಗೂ ಜೀವ ಹಾನಿ ಸಂಭವಿಸಿದೆ. ಈ ಭೂಕಂಪಗಳಲ್ಲಿ ಈವರೆಗೆ ಸುಮಾರು 3,800 ಮಂದಿ ಸಾವಿಗೀಡಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟ ಆಗಿದೆ. 7.8 ಕಂಪನಾಂಕದ ಭೂಕಂಪ ಸಂಭವಿಸಿದ ನಂತರ ಹತ್ತಾರು ಕಿರು ಭೂಕಂಪಗಳು ಸಂಭವಿಸಿದ್ದು, ಸಿರಿಯಾ ಯುದ್ಧ ಹಾಗೂ ಇನ್ನಿತರ ಬಿಕ್ಕಟ್ಟುಗಳಿಂದ ನಿರಾಶ್ರಿತರಾಗಿ ಟರ್ಕಿ ನಗರಗಳಲ್ಲಿ ಆಸರೆ ಪಡೆದಿದ್ದ ಲಕ್ಷಾಂತರ ಮಂದಿಯ ಬದುಕು ಸಂಪೂರ್ಣವಾಗಿ ಅಳಿಸಿ ಹೋಗಿದೆ. ಈ ನಡುವೆ ಟರ್ಕಿಯ ಹಾತೇ ಪ್ರಾಂತ್ಯದಲ್ಲಿನ ವಿಮಾನ ನಿಲ್ದಾಣದಲ್ಲಿನ ಏಕೈಕ ರನ್‌ವೇ ಕೂಡಾ ಇಬ್ಭಾಗವಾಗಿದ್ದು, ಉಪಯೋಗಿಸಲಸಾಧ್ಯವಾದ ಸ್ಥಿತಿಗೆ ತಲುಪಿದೆ ಎಂದು ndtv.com ವರದಿ ಮಾಡಿದೆ.

ಸಂಪೂರ್ಣವಾಗಿ ಹಾಳಾಗಿರುವ ರನ್‌ವೇ ವಿಡಿಯೊ ಸಾಮಾಜಿಕ ಜಾಲಕತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೊದಲ್ಲಿ ರನ್‌ವೇ ಇಬ್ಭಾಗವಾಗಿ, ಯಾವುದೇ ವಿಮಾನ ಹಾರಾಟಕ್ಕೂ ಯೋಗ್ಯವಲ್ಲದ ಸ್ಥಿತಿಗೆ ತಲುಪಿರುವುದು ದಾಖಲಾಗಿದೆ.

ಕಳೆದ ದಶಕಗಳಲ್ಲೇ ಸೋಮವಾರ ಸಂಭವಿಸಿದ ಟರ್ಕಿಯಲ್ಲಿನ ಭೂಕಂಪವು ಅತ್ಯಂತ ದುರಂತಮಯ ಭೂಕಂಪವಾಗಿದೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತೈಯ್ಯಪ್ ಎರ್ಡೋಗನ್ ತಿಳಿಸಿದ್ದಾರೆ. ಸೋಮವಾರ ಸಂಭವಿಸಿದ ಮೊದಲ ಭೂಕಂಪವು ದೇಶದ ಇತಿಹಾಸದಲ್ಲೇ ದಾಖಲಾಗಿರುವ ಅತ್ಯಂತ ಪ್ರಬಲ ಭೂಕಂಪವಾಗಿದೆ ಎಂದು ಭೂಕಂಪ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬಿಬಿಸಿ ಸುದ್ದಿ ಸಂಸ್ಥೆ ಪ್ರಕಾರ, ಕಹ್ರಮನ್ಮರಾಸ್ ಪ್ರಾಂತ್ಯದ ಎಲ್ಬಿಸ್ತಾನ ಜಿಲ್ಲೆಯಲ್ಲಿ ಕಂಪನ ಕೇಂದ್ರ ಹೊಂದಿದ್ದ ಎರಡನೆ ಭೂಕಂಪವು 7.5 ಕಂಪನಾಂಕಗಳ ತೀವ್ರತೆ ಹೊಂದಿತ್ತು ಎಂದು ಹೇಳಿದೆ.

Similar News