ಫೆಲೆಸ್ತೀನ್ ಯುವಕನ ಮುಖಕ್ಕೆ ಗುಂಡಿಕ್ಕಿ ಹತ್ಯೆಗೈದ ಇಸ್ರೇಲ್ ಸೇನೆ

Update: 2023-02-07 18:14 GMT

ಜೆರುಸಲೇಂ, ಫೆ.7: ಆಕ್ರಮಿತ ಪಶ್ಚಿಮ ದಂಡೆಯ ನಬ್ಲೂಸ್ ನಗರದಲ್ಲಿ ಮಂಗಳವಾರ ಇಸ್ರೇಲ್ ಪಡೆ ಫೆಲೆಸ್ತೀನ್ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಫೆಲಸ್ತೀನ್ ನ ಆರೋಗ್ಯ ಇಲಾಖೆ ಹೇಳಿದೆ.

ನಬ್ಲೂಸ್ ನಗರದ ಅಸ್ಕರ್ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಸೇನೆ ನಡೆಸಿದ ಕಾರ್ಯಾಚರಣೆ ಸಂದರ್ಭ 17 ವರ್ಷದ ಹಮ್ಝಾ ಅಮ್ಜದ್ ಅಲ್-ಅಶ್ಕರ್ ಎಂಬ ಯುವಕನ ಮುಖಕ್ಕೆ ಗುಂಡು ಹಾರಿಸಲಾಗಿದೆ. ತೀವ್ರ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಇತರ ಮೂರು ಮಂದಿಯನ್ನು ಇಸ್ರೇಲ್ ಸೇನೆ ಬಂಧಿಸಿದೆ ಎಂದು ಫೆಲೆಸ್ತೀನ್ ಭದ್ರತಾ ಪಡೆಯ ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆಯ ವಿವರಗಳನ್ನು ಪರಿಶೀಲಿಸುತ್ತಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.

ಜೆನಿನ್ ನಗರದ ಬಳಿಯ ಬರ್ಕಿನ್ನಲ್ಲಿ ನಡೆದ ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಇಸ್ರೇಲ್ ಸೇನೆ 20 ಮಂದಿ ಫೆಲಸ್ತೀನೀಯರನ್ನು ಬಂಧಿಸಿರುವುದಾಗಿ ಫೆಲಸ್ತೀನ್ನ ಅಧಿಕೃತ ಸುದ್ಧಿಸಂಸ್ಥೆ ‘ವಫಾ’ ವರದಿ ಮಾಡಿದೆ. ಸೋಮವಾರ ಜೋರ್ಡಾನ್ ಕಣಿವೆಯ ಬಳಿಯ ಜೆರಿಕೊ ನಗರದಲ್ಲಿ ಇಸ್ರೇಲ್ ಸೇನೆ ಐವರು ಶಂಕಿತ ಫೆಲೆಸ್ತೀನ್ ಬಂದೂಕುಧಾರಿಗಳನ್ನು ಹತ್ಯೆ ಮಾಡಿತ್ತು.

Similar News