ಪೇಷಾವರ ಮಸೀದಿ ದಾಳಿಯ ಸಂಚು ಅಫ್ಘಾನ್ ನಲ್ಲಿ ಸಿದ್ಧಗೊಂಡಿತ್ತು: ವರದಿ

Update: 2023-02-07 18:32 GMT

ಇಸ್ಲಮಾಬಾದ್, ಫೆ.7: ಜನವರಿ 30ರಂದು ಪೇಷಾವರದ ಮಸೀದಿಯಲ್ಲಿ ಸಂಭವಿಸಿದ್ದ ಭೀಕರ ಆತ್ಮಾಹುತಿ ದಾಳಿಯ ಪಿತೂರಿಯನ್ನು ಅಫ್ಘಾನಿಸ್ತಾನದಲ್ಲಿ ಹೆಣೆಯಲಾಗಿತ್ತು ಮತ್ತು ಕಾಬೂಲ್ ಮೂಲದ ಗುಪ್ತಚರ ಸಂಸ್ಥೆ ಆರ್ಥಿಕ ನೆರವು ಒದಗಿಸಿದೆ ಎಂದು ಪಾಕಿಸ್ತಾನದ ಕಾನೂನು ಜಾರಿ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಬಾಂಬ್ ದಾಳಿಗೆ ಬಳಸಲಾದ ಬೈಕ್ ಅನ್ನು ಮಾರಾಟ ಮಾಡಿದವರನ್ನು ಬಂಧಿಸಲಾಗಿದೆ. ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ 17 ಶಂಕಿತರನ್ನು ಬಂಧಿಸಲಾಗಿದೆ. ಆತ್ಮಾಹುತಿ ದಾಳಿಕೋರನ ಹಿಂದಿರುವ ಸೂತ್ರಧಾರಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 10 ದಶಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೇಷಾವರದ ಭಯೋತ್ಪಾದನೆ ನಿಗ್ರಹ ದಳ ಹೇಳಿದೆ. ಡಿಎನ್ಎ ಸ್ಯಾಂಪಲ್ ಮೂಲಕ ಆತ್ಮಾಹುತಿ ಬಾಂಬರ್ನ ಗುರುತನ್ನು ಪತ್ತೆಹಚ್ಚಲಾಗುವುದು. ಮಸೀದಿ ಪ್ರವೇಶಿಸುವ ಮುನ್ನ ತನ್ನ ಹೆಲ್ಮೆಟ್ ಅನ್ನು ಆತ ಮಸೀದಿಯ ದ್ವಾರದ ಬಳಿ ಬಿಟ್ಟಿದ್ದ ಎಂದು ಖೈಬರ್ ಪಖ್ತೂಂಕ್ವಾ ಪ್ರಾಂತದ ಪೊಲೀಸ್ ಮುಖ್ಯಸ್ಥ ಮೊಝಾಮ್ ಝಾ ಅನ್ಸಾರಿ ಹೇಳಿದ್ದಾರೆ.

Similar News