ಚೀನಾದ ಬೇಹುಗಾರಿಕೆ ಪ್ರಯತ್ನವನ್ನು ನಿರೀಕ್ಷಿಸಿದ್ದೆವು: ಬೈಡನ್

Update: 2023-02-07 18:40 GMT

ವಾಷಿಂಗ್ಟನ್, ಫೆ.7: ಚೀನಾದ ಬೇಹುಗಾರಿಕೆ ಬಲೂನ್ ಅಮೆರಿಕದ ಪ್ರದೇಶವನ್ನು ದಾಟಿದ ಬಳಿಕ ಅದನ್ನು ಹೊಡೆದುರುಳಿಸಿದ ಕ್ರಮವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ನಮ್ಮ ಮೇಲೆ ಬೇಹುಗಾರಿಕೆ ನಡೆಸುವ ಪ್ರಯತ್ನವನ್ನು ಚೀನಾ ಮಾಡುತ್ತದೆ ಎಂಬ ನಿರೀಕ್ಷೆಯಿತ್ತು ಎಂದಿದ್ದಾರೆ.

ಬಲೂನು ಪ್ರಕರಣದಿಂದ ನಮಗೆ ಆಶ್ಚರ್ಯವಾಗಿಲ್ಲ. ಯಾಕೆಂದರೆ ಅಮೆರಿಕದ ಮೇಲೆ ಬೇಹುಗಾರಿಕೆಯ ಪ್ರಯತ್ನವನ್ನು ಚೀನಾ ನಡೆಸಲಿದೆ ಎಂದು ನಾವು ನಿರೀಕ್ಷಿಸಿದ್ದೆವು. ಇಲ್ಲಿ ಚೀನಾದ ಮೇಲೆ ವಿಶ್ವಾಸವಿಡುವ ಪ್ರಶ್ನೆ ಬರುವುದಿಲ್ಲ. ನಾವಿಬ್ಬರು ಜತೆಯಾಗಿ ಕಾರ್ಯನಿರ್ವಹಿಸುವ ಕ್ಷೇತ್ರ ಯಾವುದು, ಎಲ್ಲಿ ನಮಗೆ ವಿರೋಧವಿದೆ ಎಂಬುದು ಇಲ್ಲಿರುವ ಪ್ರಶ್ನೆಯಾಗಿದೆ ಎಂದವರು ಹೇಳಿದ್ದಾರೆ.

 ಈ ಮಧ್ಯೆ, ಹೊಡೆದುರುಳಿಸಿದ ಬಲೂನ್ನಿಂದ ಅಮೂಲ್ಯವಾದ ಗುಪ್ತಚರ ಮಾಹಿತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ. ಬಲೂನು ಯಾವುದೇ ಮಿಲಿಟರಿ ಉದ್ದೇಶವಿಲ್ಲದ ಹವಾಮಾನ ವೀಕ್ಷಣಾ ವಿಮಾನವಾಗಿದೆ ಎಂದು ಚೀನಾ ಪ್ರತಿಪಾದಿಸಿದೆ. ಆದರೆ ಇದೊಂದು ಅತ್ಯಾಧುನಿಕ, ಅಧಿಕ ಎತ್ತರದಲ್ಲಿ ಹಾರಾಟ ನಡೆಸುವ ಬೇಹುಗಾರಿಕೆ ಸಾಧನವಾಗಿದೆ ಎಂದು ಅಮೆರಿಕ ಹೇಳಿದೆ. ಅಟ್ಲಾಂಟಿಕ್ ಸಾಗರದ ಬಳಿ ಶನಿವಾರ ಅಮೆರಿಕದ ಯುದ್ಧವಿಮಾನ ಚೀನಾದ ಬಲೂನನ್ನು ಹೊಡೆದುರುಳಿಸಿತ್ತು ಮತ್ತು ಬಲೂನಿನ ಅವಶೇಷಗಳನ್ನು ಅಮೆರಿಕದ ನೌಕಾದಳ ಮತ್ತು ಕರಾವಳಿ ರಕ್ಷಣಾ ಪಡೆ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.

 ಬಲೂನು ಕೆನಡಾದ ಕಡೆಯಿಂದ ನಮ್ಮ ವಾಯುಪ್ರದೇಶದತ್ತ ಬಂದಿರುವ ಮಾಹಿತಿ ತಿಳಿದೊಡನೆ ಅದನ್ನು ಹೊಡೆದುರುಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಆದರೆ ಈಗ ಹೊಡೆದುರುಳಿಸಿದರೆ ಅದರ ಅವಶೇಷ ನೆಲದ ಮೇಲಿರುವ ಜನರಿಗೆ ಹಾನಿ ಎಸಗಬಹುದು. ಇದು ಗಂಭೀರ ಪ್ರಕರಣವಾಗಿದೆ ಎಂದು ಅಧಿಕಾರಿಗಳು ಸಲಹೆ ನೀಡಿದ್ದರು ಎಂದು ಬೈಡನ್ ಹೇಳಿದ್ದಾರೆ.

 ಸಮುದ್ರದ ಮೇಲೆ ತೇಲುತ್ತಿದ್ದ ಕೆಲವು ಅವಶೇಷಗಳನ್ನು ವಶಕ್ಕೆ ಪಡೆದಿದ್ದೇವೆ. ಈಗ ಹವಾಮಾನ ಸೂಕ್ತವಲ್ಲದ ಕಾರಣ ಸಮುದ್ರದ ತಳ ಸೇರಿರುವ ಕೆಲವು ಅವಶೇಷಗಳನ್ನು ಮುಂದಿನ ದಿನದಲ್ಲಿ ಪತ್ತೆಹಚ್ಚಲಾಗುವುದು. ಆದರೆ ಪತನಗೊಂಡ ಬಲೂನಿನ ಚೂರುಗಳನ್ನು ಚೀನಾಕ್ಕೆ ಮರಳಿಸುವ ಪ್ರಶ್ನೆಯೇ ಇಲ್ಲ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಮಿತಿಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.

ಸಾಮಾನ್ಯ ಜೆಟ್ವಿಮಾನದ ಗಾತ್ರವಿದ್ದ ಈ ಬಲೂನು ಹಲವು ಸಾವಿರ ಪೌಂಡ್ ಗಳಷ್ಟು ತೂಕದ ಸರಕು ಸಾಗಿಸುವ ಸಾಮರ್ಥ್ಯ ಹೊಂದಿದ್ದು ಸುಮಾರು 200 ಅಡಿ ಎತ್ತರವಿತ್ತು. ಇದರ ಅವಶೇಷವು ಅಟ್ಲಾಂಟಿಕ್ ಸಮುದ್ರದ ತಳಭಾಗ ಸೇರಿದ್ದು ಈ ಅವಶೇಷ ಬಿದ್ದಿರುವ ಪ್ರದೇಶದ ನಕ್ಷೆ ರಚಿಸುವ ಕಾರ್ಯಕ್ಕೆ ನೌಕಾಪಡೆಯ ಹಡಗನ್ನು ನಿಯೋಜಿಸಲಾಗಿದೆ ಎಂದು ಅಮೆರಿಕದ ನಾರ್ಥನ್ ಕಮಾಂಡ್ ನ ಮುಖ್ಯಸ್ಥ ಜನರಲ್ ಗ್ಲೆನ್ ವ್ಯಾನ್ಹರ್ಕ್ ಹೇಳಿದ್ದಾರೆ.

Similar News