ಅಮೆರಿಕದಿಂದ 18 ಅತ್ಯಾಧುನಿಕ ಸಶಸ್ತ್ರ ಡ್ರೋಣ್ ಖರೀದಿ: ವರದಿ

Update: 2023-02-08 03:13 GMT

ಹೊಸದಿಲ್ಲಿ: ಭಾರತದ ಸಶಸ್ತ್ರ ಪಡೆಗಳು ಅಮೆರಿಕದಿಂದ 18 ಅತ್ಯಾಧುನಿಕ ಸಶಸ್ತ್ರ ಪ್ರೆಡೇಟರ್ ಎಂಕ್ಯೂ 9ಎ ಡೋಣ್‌ಗಳನ್ನು ಕೋರಿದೆ. ಅಂತೆಯೇ ನ್ಯಾಟೊದ ಸ್ಪೇಷಿಯಲ್ ಇಂಟೆಲಿಜೆನ್ಸ್ ಆರ್ಗನೈಸೇಷನ್, ಭಾರತದಿಂದ ಎಂಟು ಮೀಡಿಯಂ ಆಲ್ಟಿಟ್ಯೂಡ್ ಲಾಂಗ್ ಎಂಡ್ಯೂರೆನ್ಸ್ (ಮಾಲೆ) ಡ್ರೋಣ್‌ಗಳನ್ನು ಗಡಿ ಕಣ್ಗಾವಲು ಹಾಗೂ ವಿಚಕ್ಷಣೆಗಾಗಿ ಪಡೆಯಲಿದೆ ಎಂದು ತಿಳಿದು ಬಂದಿದೆ.

ಭಾರತೀಯ ನೌಕಾಪಡೆ ಈಗಾಗಲೇ ಎರಡು ಜನರಲ್ ಅಟೋಮಿಕ್ಸ್ ಉತ್ಪಾದಿನ ಸಮುದ್ರ ರಕ್ಷಕ (ಎಂಕ್ಯೂ 9ಬಿ) ಡ್ರೋಣ್‌ಗಳನ್ನು ಸಾಗರ ಕ್ಷೇತ್ರದ ಜಾಗೃತಿಗಾಗಿ ಅಮೆರಿಕದಿಂದ ಲೀಸ್ ಆಧಾರದಲ್ಲಿ ಪಡೆದಿದೆ. 18 ಸಶಸ್ತ್ರ ಡ್ರೋಣ್‌ಗಳನ್ನು ಅಮೆರಿಕದಿಂದ ಪಡೆಯುವ ಮೂಲಕ ಎಲ್ಲ ಮೂರು ಪಡೆಗಳಿಗೆ ತಲಾ ಆರು ಡ್ರೋಣ್‌ಗಳು ಲಭ್ಯವಾಗಲಿವೆ. ಮುಂದಿನ ಏಪ್ರಿಲ್‌ನಲ್ಲಿ ಕಾರವಾರದಲ್ಲಿ ನಡೆಯುವ ಕಂಬೈನ್ಡ್ ಕಮಾಂಡರ್ಸ್‌ ಕಾನ್ಫರೆನ್ಸ್‌ಗೆ ಮುನ್ನ ಇವುಗಳನ್ನು ಸೇವೆಗೆ ಬಳಸಿಕೊಳ್ಳಲಿವೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುವರು.

ಸಶಸ್ತ್ರ ಡ್ರೋಣ್‌ಗಳ ಖರೀದಿ ಮತ್ತು ನಿಯೋಜನೆಯಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ನೌಕಾಪಡೆ, 300 ಕೋಟಿ ಡಾಲರ್ ವೆಚ್ಚದಲ್ಲಿ 30 ಡ್ರೋಣ್‌ಗಳನ್ನು ಪಡೆಯುವ ಯೋಜನೆ ಹಾಕಿಕೊಂಡಿತ್ತು. ಕಾರ್ಯಾಚರಣೆ ವಿಶ್ಲೇಷಣೆ ಬಳಿಕ ಸಿಬ್ಬಂದಿ ಸಮಿತಿಯ ಮುಖ್ಯಸ್ಥರು ಇದನ್ನು 18ಕ್ಕೆ ಇಳಿಸಿದ್ದಾರೆ.

ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಜನರಲ್ ಅಟೋಮಿಕ್ಸ್‌ನ ಅಧ್ಯಕ್ಷ ನೀಲ್ ಬ್ಲೂ ಹಾಗೂ ಸಿಇಓ ಡಾ.ವಿವೇಕ್ ಕಾಲ್ ಹಾಗೂ ಇತರ ಉನ್ನತ ಸಿಇಓಗಳಿಗೆ ಭಾರತದ ಎನ್‌ಎಸ್‌ಎ ಅಜಿತ್ ದೋವಲ್ ಅವರ ಭೇಟಿ ವೇಳೆ ಔತಣಕೂಟ ಏರ್ಪಡಿಸಿತ್ತು. ಈ ಭೇಟಿ ವೇಳೆ ಅಮೆರಿಕ ಭಾರತದ ಜತೆ ಉನ್ನತ ತಂತ್ರಜ್ಞಾನ ಪಾಲುದಾರಿಕೆಯನ್ನು ಪ್ರಕಟಿಸಿತ್ತು.

Similar News