ವೇಗವಾಗಿ 450 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಿದ ಭಾರತದ ಮೊದಲ ಬೌಲರ್ ಆರ್.ಅಶ್ವಿನ್

Update: 2023-02-09 12:22 GMT

ಹೊಸದಿಲ್ಲಿ, ಫೆ.9: ಭಾರತದ ಪ್ರಮುಖ ಸ್ಪಿನ್ನರ್ ಆರ್.ಅಶ್ವಿನ್ (Ravichandran Ashwin) ತನ್ನ ಯಶಸ್ವಿ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದರು. ನಾಗ್ಪುರದಲ್ಲಿ ಗುರುವಾರ ನಡೆದ ಆಸ್ಟ್ರೇಲಿಯ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ಟೆಸ್ಟ್ ವೃತ್ತಿಜೀವನದಲ್ಲಿ 450 ವಿಕೆಟ್‌ಗಳನ್ನು ಪೂರೈಸಿದರು.

ಈ ಹಾದಿಯಲ್ಲಿ ಅನಿಲ್ ಕುಂಬ್ಳೆಯವರನ್ನು ಹಿಂದಿಕ್ಕಿದ ಅಶ್ವಿನ್ ವೇಗವಾಗಿ 450 ವಿಕೆಟ್‌ಗಳನ್ನು ತಲುಪಿದ ಭಾರತದ ಮೊದಲ ಹಾಗೂ ವಿಶ್ವದ 2ನೇ ಬೌಲರ್ ಎನಿಸಿಕೊಂಡರು.

ಅಶ್ವಿನ್ 450 ವಿಕೆಟ್ ಪೂರೈಸಲು 89 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಕುಂಬ್ಳೆ ತಾನಾಡಿದ 93ನೇ ಪಂದ್ಯದಲ್ಲಿ 450ನೇ ವಿಕೆಟನ್ನು ಪೂರೈಸಿದ್ದರು. ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ತಾನಾಡಿದ 80ನೇ ಟೆಸ್ಟ್ ಪಂದ್ಯದಲ್ಲಿ 450 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಿದ್ದು ವೇಗವಾಗಿ ಈ ಮೈಲಿಗಲ್ಲು ತಲುಪಿದ ಸಾಧನೆ ಮಾಡಿದ್ದಾರೆ.
 
ಅಶ್ವಿನ್ ಮೊದಲ ಟೆಸ್ಟ್ ಪಂದ್ಯದಲ್ಲಿ 42 ರನ್ ನೀಡಿ 3 ವಿಕೆಟ್‌ಗಳನ್ನು ಉರುಳಿಸಿದ್ದು, ಅವರು ಗಳಿಸಿರುವ ಒಟ್ಟು ವಿಕೆಟ್‌ಗಳ ಸಂಖ್ಯೆ 452ಕ್ಕೆ ತಲುಪಿದೆ. ಅಶ್ವಿನ್ ಜಾಗತಿಕ ಕ್ರಿಕೆಟ್‌ನಲ್ಲಿ ಟೆಸ್ಟ್ ಪಂದ್ಯದಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.

ಅಶ್ವಿನ್ ಹಾಗೂ ರವೀಂದ್ರ ಜಡೇಜ ಸ್ಪಿನ್ ಮೋಡಿಗೆ ತತ್ತರಿಸಿದ ಆಸ್ಟ್ರೇಲಿಯ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 63.5 ಓವರ್‌ಗಳಲ್ಲಿ 177 ರನ್‌ಗೆ ಆಲೌಟಾಗಿದೆ.
 

Similar News