ಟರ್ಕಿ ಭೂಕಂಪ: ನಾಪತ್ತೆಯಾಗಿದ್ದ ಭಾರತೀಯನ ಮೃತದೇಹ ಪತ್ತೆ

Update: 2023-02-11 16:25 GMT

ಇಸ್ತಾಂಬುಲ್,ಫೆ.11: ಟರ್ಕಿಯಲ್ಲಿ ಫೆಬ್ರವರಿ 6ರಂದು ಸಂಭವಿಸಿದ ಭೀಕರ ಭೂಕಂಪದ ಬಳಿಕ ಕಣ್ಮರೆಯಾಗಿದ್ದ ಭಾರತದ ಪ್ರಜೆಯೊಬ್ಬರ ಮೃತದೇಹ ಶನಿವಾರ ಪತ್ತೆಯಾಗಿದೆ. ಟರ್ಕಿಯ ದಕ್ಷಿಣ ಪ್ರಾಂತದ ಮಾಲಟ್ಯಾ ನಗರದಲ್ಲಿ ಭೂಕಂಪದಿಂದ ಕುಸಿದು ಬಿದ್ದ ಹೊಟೇಲ್ ಕಟ್ಟಡದ ಅವಶೇಷಗಳಡಿ ಅವರ ಮೃತದೇಹ ಪತ್ತೆಯಾಗಿರುವುದಾಗಿ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.

ಮೃತಪಟ್ಟ ವ್ಯಕ್ತಿಯನ್ನು ವಿಜಯ್ ಕುಮಾರ್ ಎಂದು ಗುರುತಿಸಲಾಗಿದ್ದು ಅವರು ಉತ್ತರಾಖಂಡದ ನಿವಾಸಿಯೆಂದು ತಿಳಿದುಬಂದಿದೆ. ಔದ್ಯಮಿಕ ಪ್ರವಾಸದ ನಿಮಿತ್ತ ವಿಜಯ್ ಕುಮಾರ್ ಅವರು ಟರ್ಕಿಗೆ ಆಗಮಿಸಿದ್ದರು ಎಂದು ರಾಯಭಾರಿ ಕಚೇರಿ ತಿಳಿಸಿದೆ.

ಅವರ ಪಾರ್ಥಿವಶರೀರವನ್ನು ಭಾರತಕ್ಕೆ ತರಲು ಎಲ್ಲಾ ಏರ್ಪಾಡುಗಳನ್ನು ಮಾಡಲಾಗುತ್ತಿದೆಯೆಂದು ರಾಯಭಾರಿ ಕಚೇರಿಯ ಹೇಳಿಕೆ ತಿಳಿಸಿದೆ.

ಫೆಬ್ರವರಿ 6ರಂದು ಟರ್ಕಿ ಹಾಗೂ ಸಿರಿಯದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮನೆಗಳು, ಕಟ್ಟಡಗಳು ನೆಲಸಮವಾಗಿವೆ ಹಾಗೂ ಲಕ್ಷಾಂತರ ಮಂದಿ ಸಂತ್ರಸ್ತರಾಗಿದ್ದಾರೆ.

Similar News