ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರ್ಗದರ್ಶಕರಾಗಿ ಸಾನಿಯಾ ಮಿರ್ಝಾ ನೇಮಕ

Update: 2023-02-15 05:56 GMT

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರ್ಯಾಂಚೈಸಿ  ಭಾರತೀಯ ಟೆನಿಸ್ ದಂತಕತೆ ಸಾನಿಯಾ ಮಿರ್ಝಾ(Sania Mirza) ಅವರನ್ನು 2023 ರ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ(ಡಬ್ಲ್ಯುಪಿಎಲ್) ತನ್ನ ತಂಡದ ಮಾರ್ಗದರ್ಶಕರಾಗಿ ನೇಮಕ ಮಾಡಿದೆ.

ಆರು ಬಾರಿ ಗ್ರ್ಯಾನ್ ಸ್ಲ್ಯಾಮ್‌ಗಳನ್ನು ಗೆದ್ದಿರುವ ಮಿರ್ಝಾ, 2023 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ತನ್ನ ಕೊನೆಯ ಪ್ರಮುಖ ಪಂದ್ಯಾವಳಿಯನ್ನು ಆಡಿದ್ದರು. ರೋಹನ್ ಬೋಪಣ್ಣ ಅವರೊಂದಿಗೆ ಮಿಶ್ರ ಡಬಲ್ಸ್ ಈವೆಂಟ್‌ನಲ್ಲಿ ರನ್ನರ್ಸ್ ಅಪ್ ಆಗಿದ್ದರು.

ಆರ್‌ಸಿಬಿ ಮಹಿಳಾ ತಂಡದ ಮಾರ್ಗದರ್ಶಕರಾಗಿ ಹೊಸ ಹುದ್ದೆಯನ್ನು ವಹಿಸಿಕೊಳ್ಳಲಿರುವ ಸಾನಿಯಾ ಮಿರ್ಝಾ ಈ ಬಗ್ಗೆ ಪ್ರತಿಕ್ರಿಯಿಸುತ್ತಾ, “ಆರ್‌ಸಿಬಿ ಮಹಿಳಾ ತಂಡವನ್ನು ಮಾರ್ಗದರ್ಶಕರಾಗಿ ಸೇರುವುದು ನನಗೆ ಸಂತೋಷವಾಗಿದೆ. ಭಾರತೀಯ ಮಹಿಳಾ ಕ್ರಿಕೆಟ್ ಮಹಿಳಾ ಪ್ರೀಮಿಯರ್ ಲೀಗ್‌ನೊಂದಿಗೆ ಬದಲಾವಣೆಯನ್ನು ಕಂಡಿದೆ. ಈ ಕ್ರಾಂತಿಕಾರಿ ಬದಲಾವಣೆಯ ಭಾಗವಾಗಲು ನಾನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ. ಆರ್‌ಸಿಬಿ ಹಾಗೂ  ಅದರ ಬ್ರಾಂಡ್ ತತ್ವವು ನನ್ನ ದೃಷ್ಟಿಕೋನಕ್ಕೆ ಸಂಪೂರ್ಣವಾಗಿ ಒಪ್ಪುತ್ತದೆ'' ಎಂದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾರ್ಚ್ 5 ರಂದು ಮುಂಬೈನಲ್ಲಿ ಡೆಲ್ಲಿ ಕ್ಯಾಪಿಟಲ್ಸ್  ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಫೆಬ್ರವರಿ 13 ರಂದು ನಡೆದ ಡಬ್ಲ್ಯುಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರ್ತಿಯರ  ತಂಡವನ್ನು ಆಯ್ಕೆ ಮಾಡಿದೆ. ಭಾರತದ ಓಪನರ್ ಸ್ಮೃತಿ ಮಂಧಾನ, ಆಸ್ಟ್ರೇಲಿಯದ ಆಲ್ ರೌಂಡರ್ ಎಲ್ಲಿಸ್ ಪೆರ್ರಿ,  ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ನಾಯಕಿ  ಹೀದರ್ ನೈಟ್, ನ್ಯೂಝಿಲ್ಯಾಂಡ್ ನ ನಾಯಕಿ  ಸೋಫಿ ಡಿವೈನ್ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ  3.4 ಕೋಟಿ ರೂ. ಗಳಿಗೆ ಆರ್‌ಸಿಬಿಯಿಂದ ಬಿಡ್ ಮಾಡಲ್ಪಟ್ಟ ಸ್ಮೃತಿ ಮಂಧಾನ ಮೊದಲ ಹರಾಜಿನಲ್ಲಿ ದುಬಾರಿ ಆಟಗಾರ್ತಿ ಎನಿಸಿಕೊಂಡರು.

Similar News