ಟರ್ಕಿ ಭೂಕಂಪ : 10 ದಿನದ ಬಳಿಕ ರಕ್ಷಿಸಲ್ಪಟ್ಟ ಯುವತಿ

Update: 2023-02-16 16:50 GMT

ಅಂಕಾರ, ಫೆ.16: ಟರ್ಕಿ-ಸಿರಿಯಾದಲ್ಲಿ  ಭೀಕರ ಭೂಕಂಪ ಸಂಭವಿಸಿದ 248 ಗಂಟೆಗಳ ಬಳಿಕ 17 ವರ್ಷದ ಯುವತಿಯೊಬ್ಬಳು ಕುಸಿದುಬಿದ್ದ ಕಲ್ಲುಮಣ್ಣಿನ ರಾಶಿಯಡಿ ಪವಾಡಸದೃಶವಾಗಿ ಬದುಕುಳಿದಿದ್ದು ಆಕೆಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಭೂಕಂಪದ ಕೇಂದ್ರಬಿಂದು ಇದ್ದ ಕಹ್ರಮನ್ಮರಾಸ್ ಪ್ರದೇಶದಲ್ಲಿ ಸುಮಾರು 248 ಗಂಟೆಗಳ ಬಳಿಕ ಕಲ್ಲುಮಣ್ಣಿನ ರಾಶಿಯಡಿ ಪತ್ತೆಯಾದ ಅಲೆಯ್ನಾ ಒಲ್ಮೆಝ್ ತೀವ್ರ ಅಸ್ವಸ್ಥಗೊಂಡಿದ್ದರೂ ತನ್ನ ಕಣ್ಣುಗಳನ್ನು ತೆರೆಯಲು, ಮುಚ್ಚಲು ಶಕ್ತಳಾಗಿದ್ದಳು. ಆಕೆ ಜೀವಂತವಾಗಿ ಪತ್ತೆಯಾಗಿರುವುದರಿಂದ ಈ ಪ್ರದೇಶದಲ್ಲಿ ಇನ್ನೂ ಕೆಲವರನ್ನು ಜೀವಂತವಾಗಿ ರಕ್ಷಿಸುವ ನಿರೀಕ್ಷೆ ಹೆಚ್ಚಿದೆ. ರಕ್ಷಣಾ ಕಾರ್ಯದ ಸಂದರ್ಭ ಯಾವುದೇ ಜೀವಂತ ವಸ್ತುವನ್ನು, ಅದು ಬೆಕ್ಕು ಕೂಡಾ ಆಗಿರಬಹುದು, ಕಂಡಾಗ ನಮಗೆ ಸಂತೋಷವಾಗುತ್ತದೆ ಎಂದು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಆಲಿ ಅಕ್ಡೋಗನ್ ಹೇಳಿದ್ದಾರೆ. ಈ ಮಧ್ಯೆ, ಭೂಕಂಪದಿಂದ ಇದುವರೆಗೆ ಟರ್ಕಿಯಲ್ಲಿ 36,187 ಮಂದಿ ಮತ್ತು ಸಿರಿಯಾದಲ್ಲಿ 3,688 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Similar News