ಶ್ರೀಲಂಕಾ: ವಿದ್ಯುತ್ ದರ 66% ಹೆಚ್ಚಳ

Update: 2023-02-16 17:08 GMT

ಕೊಲಂಬೊ, ಫೆ.16: ಐಎಂಎಫ್ನಿಂದ ತುರ್ತು ಸಾಲದ ನೆರವು ಪಡೆಯುವ ಪ್ರಯತ್ನ ಮುಂದುವರಿಸಿರುವ ದ್ವೀಪರಾಷ್ಟ್ರ ಶ್ರೀಲಂಕಾ ವಿದ್ಯುತ್ ದರದಲ್ಲಿ 66%ದಷ್ಟು ಹೆಚ್ಚಳ ಮಾಡಿ ಗುರುವಾರ ಆದೇಶ ಹೊರಡಿಸಿದೆ.

ಕಳೆದ ವರ್ಷ ವಿದ್ಯುತ್ ದರದಲ್ಲಿ 75%ದಷ್ಟು ಏರಿಕೆ ಮಾಡಲಾಗಿತ್ತು. ಇದರೊಂದಿಗೆ ಈಗಾಗಲೇ 54%ಕ್ಕೆ ತಲುಪಿರುವ ಹಣದುಬ್ಬರ, 36%ದಷ್ಟು ಇರುವ ಆದಾಯ ತೆರಿಗೆ ದರದಿಂದ ಕಂಗೆಟ್ಟಿರುವ ಜನಸಾಮಾನ್ಯರು ಮತ್ತಷ್ಟು ಬವಣೆ ಪಡುವಂತಾಗಿದೆ. `ಈ ಕ್ರಮದಿಂದ ಸಾರ್ವಜನಿಕರಿಗೆ, ವಿಶೇಷವಾಗಿ ಬಡವರಿಗೆ ತೊಂದರೆಯಾಗಲಿದೆ ಎಂಬ ಅರಿವು ನಮಗಿದೆ. ಆದರೆ ಶ್ರೀಲಂಕಾಕ್ಕೆ ಆರ್ಥಿಕ ಸಂಕಟ ಎದುರಾಗಿರುವುದರಿಂದ ವೆಚ್ಚ ಪ್ರತಿಫಲಿತ ದರದತ್ತ ಸಾಗದೆ ನಮಗೆ ಬೇರೆ ಆಯ್ಕೆಯಿಲ್ಲ. 

ಈ ಹೆಜ್ಜೆಯೊಂದಿಗೆ ಶ್ರೀಲಂಕಾವು ಐಎಂಎಫ್ ಕಾರ್ಯಕ್ರಮದ ನೆರವು ಪಡೆಯಲು ಇನ್ನಷ್ಟು ಹತ್ತಿರವಾಗಿದೆ ಎಂದು ನಾವು ಭಾವಿಸುತ್ತೇವೆ. `ಜನವರಿಯಿಂದ ಸರಕಾರದ ಸಬ್ಸಿಡಿಗಳನ್ನು ಸ್ಥಗಿತಗೊಳಿಸಿರುವುದರಿಂದ ಉಂಟಾದ ಅಂತರವನ್ನು ಸರಿದೂಗಿಸಲು ಮತ್ತು ದೀರ್ಘಾವಧಿಯ ಇಂಧನ ಒಪ್ಪಂದಗಳನ್ನು ಉತ್ತಮವಾಗಿ ನಿರ್ವಹಿಸಲು ವಿದ್ಯುತ್ ದರ ಹೆಚ್ಚಳದಿಂದ ಅನುಕೂಲವಾಗಲಿದೆ ' ಎಂದು ಶ್ರೀಲಂಕಾದ ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನ ವಿಜೆಶೇಕರ ಹೇಳಿದ್ದಾರೆ.

ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಶ್ರೀಲಂಕಾಕ್ಕೆ 2.9 ಶತಕೋಟಿ ಡಾಲರ್ ಆರ್ಥಿಕ ನೆರವು ನೀಡಲು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಕಳೆದ ಸೆಪ್ಟಂಬರ್ ನಲ್ಲಿ ಒಪ್ಪಿಕೊಂಡಿದ್ದರೂ, ತೆರಿಗೆ ಹೆಚ್ಚಳ, ಸಬ್ಸಿಡಿ ರದ್ದತಿ, ಸಾರ್ವಜನಿಕ ಕ್ಷೇತ್ರದ ಸಾಲದ ಕಡಿತ ಮುಂತಾದ ಕೆಲವು ಷರತ್ತುಗಳನ್ನು ವಿಧಿಸಿದೆ. ಇದೀಗ ವಿದ್ಯುತ್ ದರ ಹೆಚ್ಚಳ ಮಾಡಿರುವುದು ಹಣದುಬ್ಬರ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Similar News