ಭಿವಾನಿ ಹತ್ಯೆಗಳ ಕುರಿತು ಪ್ರಧಾನಿ ಮತ್ತು ಗೃಹ ಸಚಿವರು ಪ್ರತಿಕ್ರಿಯಿಸುವರೇ: ಅಸದುದ್ದೀನ್ ಉವೈಸಿ ಪ್ರಶ್ನೆ
ಹೈದರಾಬಾದ್: ಹರ್ಯಾಣದಲ್ಲಿನ ಭಿವಾನಿಯಲ್ಲಿ ನಡೆದಿರುವ ಇಬ್ಬರ ವ್ಯಕ್ತಿಗಳ ಹತ್ಯೆಯನ್ನು ಶುಕ್ರವಾರ ಖಂಡಿಸಿರುವ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ, ಈ ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಕ್ರಿಯಿಸುವರೆ ಎಂದು ಪ್ರಶ್ನಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.
"ಹರ್ಯಾಣದಲ್ಲಿ ಜುನೈದ್ ಹಾಗೂ ನಾಸಿರ್ ಎಂಬವರನ್ನು ಸಂಘಟಿತ ಗುಂಪೊಂದು ಹತ್ಯೆಗೈದಿರುವುದನ್ನು ಬಲವಾಗಿ ಖಂಡಿಸುತ್ತೇನೆ. ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರು ಈ ಘಟನೆಗೆ ಜವಾಬ್ದಾರರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಘಟನೆಯ ಕುರಿತು ಪ್ರತಿಕ್ರಿಯಿಸುವರೆ?" ಎಂದು ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಉವೈಸಿ ಪ್ರಶ್ನಿಸಿದ್ದಾರೆ.
ಗುರುವಾರ ರಾಜಸ್ಥಾನದ ಭರತ್‌ಪುರ ಜಿಲ್ಲೆಯಿಂದ ಇಬ್ಬರು ವ್ಯಕ್ತಿಗಳನ್ನು ಗೋರಕ್ಷಕರು ಎಂದು ಆರೋಪಿಸಲಾಗಿರುವ ಗುಂಪೊಂದು ಅಪಹರಿಸಿತ್ತು. ನಂತರ ಅವರಿಬ್ಬರ ಸುಟ್ಟು ಕರಕಲಾದ ದೇಹಗಳು ಹರ್ಯಾಣದ ಭಿವಾನಿ ಜಿಲ್ಲೆಯಲ್ಲಿ ಮಹಿಂದ್ರಾ ಬೊಲೆರೊ ಕಾರಿನಲ್ಲಿ ದೊರೆತಿತ್ತು ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಪಹರಣಕ್ಕೊಳಗಾದ ವ್ಯಕ್ತಿಗಳ ಕುಟುಂಬದ ಸದಸ್ಯರ ಪ್ರಕಾರ, ಅಪಹರಣಕಾರರು ಬಜರಂಗ ದಳದ ಸದಸ್ಯರು ಎಂದೂ ವರದಿಯಲ್ಲಿ ಹೇಳಲಾಗಿದೆ.
ಅಪಹರಣಕಾರರಿಗೆ ಬಿಜೆಪಿ ಮತ್ತು ಆರೆಸ್ಸೆಸ್ ಬೆಂಬಲವಿದೆ ಎಂದು ಆರೋಪಿಸಿರುವ ಉವೈಸಿ, ಗೋರಕ್ಷಕ ಗುಂಪು ಎಂದು ಹೇಳಿಕೊಂಡಿರುವ ಗುಂಪು ನಡೆಸಿರುವ ಅಮಾನುಷ ಹತ್ಯೆಯಿದು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಹರ್ಯಾಣದಲ್ಲಿನ ಬಿಜೆಪಿ ಸರ್ಕಾರವು ಇಂತಹ ಶಕ್ತಿಗಳಿಗೆ ರಕ್ಷಣೆ ಮತ್ತು ಆಶ್ರಯ ನೀಡಬಾರದು ಎಂದೂ ಅವರು ಆಗ್ರಹಿಸಿದ್ದಾರೆ.
ಈ ನಡುವೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಜರಂಗ ದಳದ ನಾಯಕ ಮೋನು ಮನೇಸರ್, ಘಟನೆಯಲ್ಲಿ ತಮ್ಮ ಪಾತ್ರವಿದೆ ಎಂಬ ಆರೋಪವನ್ನು ಅಲ್ಲಗಳೆದಿದ್ದಾರೆ.
ಇದನ್ನು ಓದಿ: ಆರೆಸ್ಸೆಸ್ ಜೊತೆ ಸಭೆ ನಡೆಸಿದ ಜಮಾಅತೆ ಇಸ್ಲಾಮಿ ಸಂಘಟನೆಯ ಮುಖಂಡರು: ವ್ಯಾಪಕ ಟೀಕೆ