2ನೇ ಟೆಸ್ಟ್: ಕೊಹ್ಲಿ ಔಟ್ ನೀಡಿದ ಅಂಪೈರ್ ಬಗ್ಗೆ ಅಭಿಮಾನಿಗಳ ಆಕ್ರೋಶ

Update: 2023-02-18 13:51 GMT

ಹೊಸದಿಲ್ಲಿ:  ಆಸ್ಟ್ರೇಲಿಯ ವಿರುದ್ಧ ಶನಿವಾರ ನಡೆದ 2ನೇ ಟೆಸ್ಟ್‌ನ 2ನೇ ದಿನದಾಟದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯದ ಪರ ಚೊಚ್ಚಲ ಪಂದ್ಯವನ್ಣಾಡುತ್ತಿರುವ ಮ್ಯಾಥ್ಯೂ ಕುಹ್ನೆಮನ್‌ಗೆ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ ಕೊಹ್ಲಿ ವಿವಾದಾತ್ಮಕ ರೀತಿಯಲ್ಲಿ ಔಟಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಅಂಪೈರಿಂಗ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತವು ಇನ್ನಿಂಗ್ಸ್‌ನ 50 ನೇ ಓವರ್‌ನಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ  44 ರನ್‌ ಗಳಿಸಿದ್ದ ಕೊಹ್ಲಿ  ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ವಿಶ್ವಾಸ ಮೂಡಿಸಿದ್ದರು. ಮ್ಯಾಥ್ಯೂ ಕುಹ್ನೆಮನ್‌ ಎಸೆದ ಚೆಂಡು  ಬಹುತೇಕ ಏಕಕಾಲದಲ್ಲಿ ಬ್ಯಾಟ್ ಮತ್ತು ಪ್ಯಾಡ್‌ಗೆ ಬಡಿದಿತ್ತು. ಆಸೀಸ್ ಆಟಗಾರ  ಔಟ್ ಗಾಗಿ ಮನವಿ ಸಲ್ಲಿಸಿದರು ಹಾಗೂ  ಭಾರತೀಯ ಅಂಪೈರ್ ನಿತಿನ್ ಮೆನನ್ ಔಟ್ ತೀರ್ಪು ನೀಡಿದರು.

ಔಟನ್ನು ಒಪ್ಪದ ಕೊಹ್ಲಿ ಡಿಆರ್ ಎಸ್ ಮೊರೆ ಹೋದರು. ರಿವೀವ್ ವೇಳೆ ಚೆಂಡು ಬ್ಯಾಟ್  ಹಾಗೂ ಪ್ಯಾಡ್ ಎರಡಕ್ಕೂ ಏಕಕಾಲದಲ್ಲಿ ಬಡಿದಿದೆ ಎಂದು ಅಲ್ಟ್ರಾ ಎಡ್ಜ್ ಸ್ಪಷ್ಟವಾಗಿ ತೋರಿಸಿದೆ.

ಅಂಪೈರಿಂಗ್ ವ್ಯಾಪಕ ಟೀಕೆಗೆ ಗುರಿಯಾಗಿದೆ.  ಕೊಹ್ಲಿ ವಿಚಾರದಲ್ಲಿ ಪ್ರತಿ ಬಾರಿಯೂ ಅಂಪೈರ್ ಗಳು ಕುಟಿಲ ಆಟ ಆಡುತ್ತಾರೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.

Similar News