ಇನ್ನೊಂದು ಬೃಹತ್‌ ಯೋಜನೆ ಘೋಷಿಸಿದ ಸೌದಿ ಅರೇಬಿಯಾ; ವೀಡಿಯೋ ವೈರಲ್‌

Update: 2023-02-20 11:51 GMT

ರಿಯಾದ್: ಸೌದಿ ಅರೇಬಿಯ ಸರ್ಕಾರ ದೇಶದ ರಾಜಧಾನಿ ರಿಯಾದ್ ನ ಕೇಂದ್ರ ಪ್ರದೇಶ ನ್ಯೂ ಮುರಬ್ಬದಲ್ಲಿ ಹೊಸ ಬೃಹತ್‌ ಕಟ್ಟಡ-ಮುಕಾಬ್ ನಿರ್ಮಿಸುವ ತನ್ನ ಯೋಜನೆಯನ್ನು ಘೋಷಿಸಿದೆ. ಈ ಬೃಹತ್‌ ಕಟ್ಟಡವು ರಿಯಾದ್ ನಗರದ ಚಿತ್ರಣವನ್ನೇ ಬದಲಾಯಿಸಲಿದೆ ಎಂದು ಹೇಳಲಾಗುತ್ತಿದೆ.‌ ಈ ಹೊಸ ಪ್ರಸ್ತಾವಿತ ಕಟ್ಟಡದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಘನ ಆಕಾರದಲ್ಲಿರುವ ಈ ಕಟ್ಟಡವು ನ್ಯೂಯಾರ್ಕಿನ ಎಂಪೈರ್‌ ಸ್ಟೇಟ್‌ ಕಟ್ಟಡಕ್ಕಿಂತ 20 ಪಟ್ಟು ದೊಡ್ಡದಿರಲಿದೆ. ಅದರಲ್ಲಿ ಮ್ಯೂಸಿಯಂ, ತಂತ್ರಜ್ಞಾನ ಮತ್ತು ವಿನ್ಯಾಸ ವಿಶ್ವವಿದ್ಯಾಲಯ, ಬಹು-ಉದ್ದೇಶಿತ ಥಿಯೇಟರ್‌ ಹಾಗು 80ಕ್ಕೂ ಅಧಿಕ ಮನರಂಜನಾ ಮತ್ತು ಸಾಂಸ್ಕೃತಿಕ ತಾಣಗಳಿರಲಿವೆ

ನ್ಯೂ ಮುರಬ್ಬ 25 ಮಿಲಿಯನ್‌ ಚದರ ಕಿಮೀ ವಿಸ್ತೀರ್ಣ ಹೊಂದಲಿದ್ದು ಇಲ್ಲಿ 1,04,000 ವಸತಿಗಳು, 9000 ಹೋಟೆಲ್‌ ಕೊಠಡಿಗಳು, 9,80,000 ಚದರ ಮೀಟರ್‌ ರಿಟೇಲ್‌ ಸ್ಥಳ, 1.4 ಮಿಲಿಯನ್‌ ಚದರ ಮೀಟರ್‌ ಕಚೇರಿ ಸ್ಥಳ, 6,20,000 ಚದರ ಮೀಟರ್‌ ಮನರಂಜನಾ ಸ್ಥಳ, 1.8 ಮಿಲಿಯನ್‌ ಚದರ ಮೀಟರ್‌ ವ್ಯಾಪ್ತಿಯಲ್ಲಿ ಸಮುದಾಯ ಸವಲತ್ತುಗಳಿರಲಿವೆ.

ಇದಕ್ಕಾಗಿ ಪ್ರತ್ಯೇಕ ಸಾರಿಗೆ ವ್ಯವಸ್ಥೆಯಿರಲಿದ್ದು ವಿಮಾನ ನಿಲ್ದಾಣದಿಂದ ಇಲ್ಲಿಗೆ ವಾಹನದಲ್ಲಿ 20 ನಿಮಿಷಗಳಲ್ಲಿ ತಲುಪಬಹುದಾಗಿದೆ. ಈ ಯೋಜನೆ 2030ರ ವೇಳೆಗೆ ಪೂರ್ಣಗೊಳ್ಳಲಿದೆ.

ಕಳೆದ ವರ್ಷವೇ ಸೌದಿ ಅರೇಬಿಯಾ 90 ಲಕ್ಷ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ಬೃಹತ್‌ ವಸತಿ ಯೋಜನೆಯನ್ನು ಘೋಷಿಸಿತ್ತು. ಇದರ ನಿರ್ಮಾಣ ಈಗಾಗಲೇ ಪ್ರಗತಿಯಲ್ಲಿದ್ದು. 2017 ರಲ್ಲಿ ಘೋಷಣೆಗೊಂಡ ಗಲ್ಫ್‌ ಆಫ್‌ ಅಖಾಬ ಸಮೀಪದ ನಿಯೋಮ್‌ ಸೈಟ್‌ನ ಕೇಂದ್ರ ಇದಾಗಲಿದೆ. 

Full View

Similar News