​ಮತಪತ್ರಗಳನ್ನು ಮುದ್ರಿಸಲೂ ದುಡ್ಡಿಲ್ಲ, ಆರ್ಥಿಕ ಸಂಕಷ್ಟ: ಸ್ಥಳೀಯಾಡಳಿತ ಚುನಾವಣೆ ಮುಂದೂಡಿದ ಶ್ರೀಲಂಕಾ

Update: 2023-02-21 18:22 GMT

ಕೊಲಂಬೊ, ಫೆ.೨೧: ಆರ್ಥಿಕವಾಗಿ ದಿವಾಳಿಯೆದ್ದಿರುವ ದ್ವೀಪರಾಷ್ಟ್ರವಾದ ಶ್ರೀಲಂಕಾವು ಮುಂದಿನ ತಿಂಗಳು ನಡೆಯಲಿದ್ದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳನ್ನು ಮುಂದೂಡಲು ನಿರ್ಧರಿಸಿದೆ. 

ಮತಪತ್ರಗಳನ್ನು ಮುದ್ರಿಸಲು, ಇಂಧನ ಪೂರೈಸಲು  ಹಾಗೂ ಮತಗಟ್ಟೆಗಳಿಗೆ ಪೊಲೀಸ್ ರಕ್ಷಣೆ ಒದಗಿಸಲು ಹಣಕಾಸು ನಿಧಿಯನ್ನು ಪೂರೈಸುವುದಕ್ಕೆ ಸರಕಾರ ಬೊಕ್ಕಸವು   ನಿರಾಕರಿಸಿರುವುದರಿಂದ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲವೆಂದು ಚುನಾವಣಾ ಆಯೋಗವು  ನ್ಯಾಯಾಲಯಕ್ಕೆ  ನೀಡಿದ ವಿವರಣೆಯಲ್ಲಿ ತಿಳಿಸಿದೆ.

‘‘ ಸ್ಥಳೀಯಾಡಳಿತ  ಸಂಸ್ಥೆಗಳ ಚುನಾವಣೆಯು ಸಕಾಲದಲ್ಲಿ ನಡೆಯಲಿದೆಯೆಂದು ನಾನು  ಇತ್ತೀಚೆಗೆ ಸುಪ್ರೀಂಕೋರ್ಟ್ಗೆ  ಮುಚ್ಚಳಿಕೆ ಬರೆದುಕೊಟ್ಟಿದ್ದೆ.ಆದರೆ ಸರಕಾರವು ಚುನಾವಣೆಗೆ ಅಗತ್ಯವಿರುವ ನಿಧಿಗಳನ್ನು ಪೂರೈಸಲು ನಿರಾಕರಿಸುತ್ತಿರುವುದರಿಂದ ನನಗೆ ಅದು ಸಾಧ್ಯವಾಗುತ್ತಿಲ್ಲ’’ ಎಂದು ಶ್ರೀಲಂಕಾದ ಚುನಾವಣಾ ಆಯೋಗದ ಮುಖ್ಯಸ್ಥ ನಿಮಲ್ ಪುಂಚಿಹೆವಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಕೂಡಾ  ವೇತನ, ಪಿಂಚಣಿ ಪಾವತಿಗೆ ಹಾಗೂ  ಅಗತ್ಯ ಸೇವೆಗಳ ನಿರ್ವಹಣೆಗೆ ಸರಕಾರದ ವರಮಾನವು  ಸಾಲುತ್ತಿಲ್ಲವಾದ ಕಾರಣ ಚುನಾವಣೆಗಳನ್ನು ನಡೆಸುವುದು ಅಸಾಧ್ಯವಾಗಿಬಿಟ್ಟಿದೆ ಎಂದು ಹೇಳಿದ್ದರು.

ಈ ಮಧ್ಯೆ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಮುಂದೂಡಿಕೆ ವಿರೋಧಿಸಿ  ಶ್ರೀಲಂಕಾ ದ ಪ್ರತಿ ಪಕ್ಷಸದಸ್ಯರು ಸಂಸತ್ನಲ್ಲಿ  ಮಂಗಳವಾರ ಬಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರಿಂದ ಸದನನವನ್ನು ಮುಂದೂಡಲಾಯಿತು.
ಮಾರ್ಚ್ ೯ರಂದು ನಡೆಯಲಿದ್ದ ಸ್ಥಳೀಯಾಡಳಿತ ಸಂಸ್ಥೆಗಳು ಚುನಾವಣೆಯು ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರಿಗಿರುವ ಜನಬೆಂಬಲದ ಕುರಿತ ಪ್ರಮುಖ ಅಗ್ನಿಪರೀಕ್ಷೆಯೆಂದೇ ಪರಿಗಣಿಸಲ್ಪಟ್ಟಿತ್ತು. ತೀವ್ರ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದ ಬಳಿಕ ನಡೆದ ರಾಜಕೀಯ ವಿದ್ಯಮಾನಗಳಲ್ಲಿ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಅಧಿಕಾರ ವಹಿಸಿಕೊಡಂಇದ್ದರು.

Similar News