ಗುರುವಾರ ಮೊದಲ ಸೆಮಿಪೈನಲ್ : ಭಾರತ V\S ಆಸ್ಟ್ರೇಲಿಯ

ಮಹಿಳಾ ಟಿ20 ವಿಶ್ವ ಕಪ್

Update: 2023-02-22 17:57 GMT

ಕೇಪ್‌ಟೌನ್ (ದಕ್ಷಿಣ ಆಫ್ರಿಕಾ), ಫೆ. 22: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟ್ವೆಂಟಿ20 ಕ್ರಿಕೆಟ್ ವಿಶ್ವಕಪ್‌ನ ಮೊದಲ ಸೆಮಿಪೈನಲ್‌ನಲ್ಲಿ ಭಾರತ ಗುರುವಾರ ಆಸ್ಟ್ರೇಲಿಯವನ್ನು ಎದುರಿಸಲಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡವು ಕಳೆದ ಐದು ವರ್ಷಗಳ ಅವಧಿಯಲ್ಲಿ ಪ್ರಮುಖ ತಂಡಗಳ ಪೈಕಿ ಒಂದಾಗಿದೆ ಯಾದರೂ, ಯಾವುದೇ ಪ್ರಮುಖ ಟ್ರೋಫಿಯನ್ನು ಗೆಲ್ಲಲು ಅದಕ್ಕೆ ಸಾಧ್ಯವಾಗಿಲ್ಲ.

ಈ ಐಸಿಸಿ ಪಂದ್ಯಾವಳಿಯಲ್ಲಿ ಅದು ನಿರೀಕ್ಷೆಯಂತೆಯೇ ಸೆಮಿಫೈನಲ್ ತಲುಪಿದೆ. ಆದರೂ, ಈ ವಿಶ್ವಕಪ್‌ನಲ್ಲಿ ಈವರೆಗೆ ಅದರ ನಿರ್ವಹಣೆಯೇನೂ ಗಮನ ಸೆಳೆಯುವಂತಿಲ್ಲ. ಗುರುವಾರದ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ ಜಯ ಗಳಿಸುವ ಇರಾದೆ ಇದ್ದರೆ ಅದು ತನ್ನ ಆಟದ ಮಟ್ಟವನ್ನು ಗಣನೀಯವಾಗಿ ಮೇಲ್ದರ್ಜೆಗೇರಿಸಬೇಕಾಗಿದೆ.

ಸ್ವದೇಶದಲ್ಲಿ ನಡೆದ ಈ ಹಿಂದಿನ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯವು ಭಾರತವನ್ನು ಸೋಲಿಸಿತ್ತು. ಅದೂ ಅಲ್ಲದೆ, ಕಳೆದ ವರ್ಷ ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಚಿನ್ನದ ಪದಕದ ಪಂದ್ಯದಲ್ಲೂ ಆಸ್ಟ್ರೇಲಿಯವು ಭಾರತವನ್ನು ಸೋಲಿಸಿದೆ.

2017ರಲ್ಲಿ ನಡೆದ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದ ಬಳಿಕ ಭಾರತದಲ್ಲಿ ಮಹಿಳಾ ಕ್ರಿಕೆಟ್ ಅಗಾಧವಾಗಿ ಬೆಳೆದಿದೆ. ಈಗ ಒಂದು ಪ್ರಮುಖ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಕ್ರೀಡೆಯಲ್ಲಿನ ತನ್ನ ಪಾರಮ್ಯವನ್ನು ಸಾರಲು ಅದು ಮುಂದಾಗಬೇಕಾಗಿದೆ. ಗುಂಪು ಹಂತದ ತನ್ನ ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳನ್ನು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವು ಗೆದ್ದಿದೆಯಾದರೂ, ಐರ್‌ಲ್ಯಾಂಡ್ ವಿರುದ್ಧದ ಪಂದ್ಯ ಸೇರಿದಂತೆ ಒಂದನ್ನಾದರೂ ಅದು ಸಮಾಧಾನಕರವಾಗಿ ಗೆದ್ದಿದೆ ಎಂದು ಹೇಳುವಂತಿಲ್ಲ. ಅದು ಇಂಗ್ಲೆಂಡ್ ವಿರುದ್ಧ ಮಾತ್ರ ಸೋಲನುಭವಿಸಿದೆ.

ಮೆಗ್ ಲ್ಯಾನಿಂಗ್ ನೇತೃತ್ವದ ಆಸ್ಟ್ರೇಲಿಯವು ನಿರಂತರವಾಗಿ 22 ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ಹೋಗುತ್ತಿದೆ.

2021 ಮಾರ್ಚ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಟಿ20 ಪಂದ್ಯವೊಂದನ್ನು ಸೋತ ಬಳಿಕ, ಅದು ಯಾವುದೇ ಮಾದರಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಸೋತಿದೆ. ಆದರೆ, ಈ ಎರಡೂ ಸೋಲುಗಳು ಭಾರತದ ವಿರುದ್ಧವೇ ಬಂದಿವೆ ಎನ್ನುವುದು ಗಮನಾರ್ಹ.

ಡಿಸೆಂಬರ್‌ನಲ್ಲಿ ಮುಂಬೈಯಲ್ಲಿ ನಡೆದ ಟ್ವೆಂಟಿ ಸರಣಿಯಲ್ಲಿ, ಆಸ್ಟ್ರೇಲಿಯವು ಆತಿಥೇಯ ತಂಡವನ್ನು 4-1ರಿಂದ ಮಣಿಸಿದೆ.

Similar News