×
Ad

ಸ್ಪಾಟ್ ಫಿಕ್ಸಿಂಗ್‌ ಆರೋಪ: ಮಧ್ಯಪ್ರದೇಶ ವೇಗಿ ಸುಧೀಂದ್ರರ ಜೀವಾವಧಿ ನಿಷೇಧ ತೆರವು

Update: 2023-02-22 23:39 IST

ಮುಂಬೈ, ಫೆ. 22: ಸ್ಟಿಂಗ್ ಕಾರ್ಯಾಚರಣೆ ಯೊಂದರ ವೇಳೆ, ಸ್ಥಳೀಯ ಪಂದ್ಯವೊಂದರಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿರುವುದಕ್ಕಾಗಿ ಮಧ್ಯಪ್ರದೇಶದ ವೇಗದ ಬೌಲರ್ ಟಿ.ಪಿ. ಸುಧೀಂದ್ರ ವಿರುದ್ಧ ವಿಧಿಸಲಾಗಿದ್ದ ಆಜೀವ ನಿಷೇಧವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಓಂಬುಡ್ಸ್ ಮನ್ ವಿನೀತ್ ಸಾರನ್ 10 ವರ್ಷ 8 ತಿಂಗಳಿಗೆ ಇಳಿಸಿದ್ದಾರೆ.

38 ವರ್ಷದ ಸುಧೀಂದ್ರ ತನ್ನ ಕೊನೆಯ ಐಪಿಎಲ್ ಪಂದ್ಯವನ್ನು 2012 ಮೇ ತಿಂಗಳಲ್ಲಿ ಆಡಿದ್ದರು. ಡೆಕ್ಕನ್ ಚಾರ್ಜರ್ಸ್ ಪರವಾಗಿ ಆಡುತ್ತಿದ್ದ ಅವರು ಕೊನೆಯದಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ್ದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ.

‘‘ನಾನು ಕ್ರಿಕೆಟ್ ಮೈದಾನಕ್ಕೆ ಮರಳಿ ಆಡಲು ಬಯಸುತ್ತೇನೆ. ಅದಕ್ಕಾಗಿ ಸ್ವಲ್ಪ ದೈಹಿಕ ಕ್ಷಮತೆಯನ್ನು ಸಾಧಿಸಬೇಕಾಗಿದೆ. ನನ್ನ ವಿಧಿಯು ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎನ್ನುವುದನ್ನು ನೋಡೋಣ. ಆಗಿ ಹೋಗಿರುವುದನ್ನು ನೆನಪಿಸಲು ನಾನು ಬಯಸುವುದಿಲ್ಲ. ಬದಲಿಗೆ, ಭವಿಷ್ಯದತ್ತ ನೋಡಲು ಬಯಸುತ್ತೇನೆ’’ ಎಂದು ತನ್ನನ್ನು ಸಂಪರ್ಕಿಸಿದಾಗ ಅವರು ಹೇಳಿದರು.

ಸುಧೀಂದ್ರ ಮಧ್ಯಪ್ರದೇಶದ ಪರವಾಗಿ 27 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿ 108 ವಿಕೆಟ್‌ಗಳನ್ನು ಗಳಿಸಿದ್ದಾರೆ. ಅವರು 2012 ರಣಜಿ ಟ್ರೋಫಿ ಋತುವಿನಲ್ಲಿ ಗರಿಷ್ಠ ವಿಕೆಟ್ ಗಳಿಕೆದಾರನಾಗಿದ್ದರು. ಅವರನ್ನು ಭಾರತ ‘ಎ’ ತಂಡಕ್ಕೂ ಆರಿಸಲಾಗಿತ್ತು.

Similar News