×
Ad

ಉಕ್ರೇನ್‌ನಲ್ಲಿ ಶಾಂತಿಸ್ಥಾಪನೆ ಅತ್ಯಗತ್ಯ: ವಿಶ್ವಸಂಸ್ಥೆ ನಿರ್ಣಯ ‌ ಮತದಾನದಿಂದ ದೂರವುಳಿದ ಭಾರತ

Update: 2023-02-24 23:19 IST

ವಿಶ್ವಸಂಸ್ಥೆ, ಫೆ.24: ಉಕ್ರೇನ್ ಮೇಲಿನ ರಶ್ಯ ದಾಳಿ 2ನೇ ವರ್ಷಕ್ಕೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆ ಮತ್ತು ತನ್ನ ಸೇನೆಯನ್ನು ಉಕ್ರೇನ್ ನೆಲದಿಂದ ವಾಪಾಸು ಕರೆಸಿಕೊಳ್ಳುವಂತೆ ರಶ್ಯಕ್ಕೆ ಕರೆ ನೀಡುವ ಮಹತ್ವದ ನಿರ್ಣಯವನ್ನು ಅಂಗೀಕರಿಸಲಾಗಿದೆ.

‌ಉಕ್ರೇನ್ ರಚಿಸಿದ್ದ ನಿರ್ಣಯದ ಕುರಿತು ನಡೆದ ಮತದಾನದಿಂದ ಭಾರತ, ಚೀನಾ ಸೇರಿದಂತೆ 32 ದೇಶಗಳು ದೂರ ಉಳಿದವು. ನಿರ್ಣಯದ ಪರ 141 ದೇಶಗಳು ಹಾಗೂ ವಿರುದ್ಧ 7 ದೇಶಗಳು ಮತ ಚಲಾಯಿಸಿವೆ. ನಿರ್ಣಯದ ಪರ ನಿರೀಕ್ಷೆಗೂ ಮೀರಿದ ದೇಶಗಳಿಂದ ಬೆಂಬಲ ದೊರಕಿರುವುದು, ಪಾಶ್ಚಿಮಾತ್ಯ ದೇಶಗಳಷ್ಟೇ  ಉಕ್ರೇನ್ ಪರ ಇವೆ ಎಂಬ ಗ್ರಹಿಕೆಯನ್ನು ದೂರಗೊಳಿಸಿದೆ. ಲ್ಯಾಟಿನ್ ಅಮೆರಿಕ, ಆಫ್ರಿಕಾ, ಏಶ್ಯಾದ ದೇಶಗಳೂ ಉಕ್ರೇನ್ ಪರ ನಿಂತಿವೆ  ಎಂದು ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಹೇಳಿದ್ದಾರೆ. 

ಬೆಲಾರಸ್, ಮಾಲಿ, ನಿಕರಾಗುವ, ರಶ್ಯ, ಸಿರಿಯಾ, ಉತ್ತರ ಕೊರಿಯಾ ಮತ್ತು ಎರಿಟ್ರಿಯಾ ದೇಶಗಳು ನಿರ್ಣಯವನ್ನು ವಿರೋಧಿಸಿದವು. ಉಕ್ರೇನ್ ಸಂಷರ್ಘಕ್ಕೆ ಸಂಬಂಧಿಸಿ ಇದುವರೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಂಗೀಕರಿಸಿದ ಐದು ನಿರ್ಣಯಗಳ ಪೈಕಿ ಇದು ಅತ್ಯಧಿಕ ಬಹುಮತದ ನಿರ್ಣಯವಾಗಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ  ಎರಡು ದಿನ ನಡೆದ ಚರ್ಚೆಯಲ್ಲಿ 75ಕ್ಕೂ ಅಧಿಕ ದೇಶಗಳ ವಿದೇಶಾಂಗ ಸಚಿವರು ಹಾಗೂ ರಾಜತಾಂತ್ರಿಕರು  ಅಭಿಪ್ರಾಯ ಮಂಡಿಸಿದ್ದರು.

ಉಕ್ರೇನಿಯನ್ನರು ನಮ್ಮ ಸಹಾನುಭೂತಿ ಮಾತ್ರವಲ್ಲ, ನಮ್ಮ ಬೆಂಬಲ ಮತ್ತು ಒಗ್ಗಟ್ಟಿಗೂ ಅರ್ಹರು ಎಂದು ಪೋಲ್ಯಾಂಡ್‌ನ ಪ್ರತಿನಿಧಿ ಹೇಳಿದರು. ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸುವ ಮೂಲಕ ಬೆಂಕಿಗೆ ತುಪ್ಪ ಸುರಿಯುತ್ತಿವೆ ಎಂಬ ವಾದಕ್ಕೆ ಉತ್ತರಿಸಿದ ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲಿನಾ ಬೇರ್‌ಬಾಕ್ ‘ ಈ ಯುದ್ಧವನ್ನು ಪಾಶ್ಚಿಮಾತ್ಯರು ಆಯ್ಕೆ ಮಾಡಿಲ್ಲ ಅಥವಾ ಬಯಸಿಲ್ಲ. ರಶ್ಯ ಹೋರಾಟ ನಿಲ್ಲಿಸಿದರೆ ಈ ಯುದ್ಧ ಅಂತ್ಯಗೊಳ್ಳುತ್ತದೆ ಮತ್ತು   ನಾವು ಇದರ ಬದಲು ನಮ್ಮ ಶ್ರಮ ಮತ್ತು ಹಣವನ್ನು ಶಾಲೆಗಳಿಗೆ ನೆರವಾಗಲು, ಹವಾಮಾನ ಬದಲಾವಣೆ ಸಮಸ್ಯೆ ನಿವಾರಣೆಗೆ ಬಳಸುತ್ತೇವೆ’ ಎಂದರು.

ಶಾಂತಿ ಮಾತುಕತೆಗೆ ವೇದಿಕೆ ಕಲ್ಪಿಸಲು ಅಂತರಾಷ್ಟ್ರೀಯ ಸಮುದಾಯ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆಯಲ್ಲಿನ ಚೀನಾದ ಸಹಾಯಕ ರಾಯಭಾರಿ ದಾಯ್ ಬಿಂಗ್ ಹೇಳಿದರು. ಇಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸ್ಪಷ್ಟ ಸಂದೇಶ ರವಾನಿಸಿದೆ. ಅಂತರಾಷ್ಟ್ರೀಯ ಸಮುದಾಯವು ಉಕ್ರೇನ್‌ನೊಂದಿಗೆ ನಿಂತಿರುವುದನ್ನು ಇದು ತೋರಿಸಿದೆ ಎಂದು ಯುರೋಪಿಯನ್ ಯೂನಿಯನ್‌ನ ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಫ್ ಬೊರೆಲ್ ಹೇಳಿದರು.

ಮಹತ್ವದ ನಿರ್ಣಯ 

ನಿರ್ಣಯವು ಉಕ್ರೇನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆಂಬಲವನ್ನು ಪುನರುಚ್ಚರಿಸಿದೆ. ಜತೆಗೆ, ಉಕ್ರೇನ್‌ನಿಂದ ವಶಕ್ಕೆ ಪಡೆದ ಪ್ರದೇಶದ ಮೇಲೆ ರಶ್ಯದ ಹಕ್ಕುಸಾಧನೆಯನ್ನು ತಿರಸ್ಕರಿಸಿದೆ. ರಶ್ಯ ಒಕ್ಕೂಟವು ತಕ್ಷಣವೇ ಬೇಷರತ್ತಾಗಿ ತನ್ನ ಎಲ್ಲಾ ಮಿಲಿಟರಿ ಪಡೆಗಳನ್ನು ತನ್ನ ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗಡಿಯೊಳಗೆ ಹಿಂದಕ್ಕೆ ಕರೆಸಿಕೊಳ್ಳಬೇಕು ಮತ್ತು ದ್ವೇಷದ ಕೃತ್ಯಗಳನ್ನು ನಿಲ್ಲಿಸಬೇಕು ಎಂದು ಕರೆ ನೀಡಿದೆ.

ಮತದಾನದಿಂದ ದೂರವುಳಿದ ಭಾರತ

ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಯ ಅಗತ್ಯವನ್ನು ಒತ್ತಿಹೇಳುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯದ ಕುರಿತ ಮತದಾನದಿಂದ ಭಾರತ ಸೇರಿದಂತೆ 32 ದೇಶಗಳು ದೂರ ಉಳಿದವು.

ಭಾರತದ ನಿಲುವಿನ ಬಗ್ಗೆ ಸಭೆಯಲ್ಲಿ ವಿವರಣೆ ನೀಡಿದ ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿ ರುಚಿರಾ ಕಂಬೋಜ್ ‘ಭಾರತವು ಬಹುಪಕ್ಷೀಯತೆಗೆ ದೃಢವಾಗಿ ಬದ್ಧವಾಗಿದೆ ಮತ್ತು ವಿಶ್ವಸಂಸ್ಥೆ ಸನದು(ಚಾರ್ಟರ್) ತತ್ವಗಳನ್ನು ಎತ್ತಿಹಿಡಿಯುತ್ತದೆ. ಬಿಕ್ಕಟ್ಟು ನಿವಾರಣೆಗೆ ಸಂವಾದ ಮತ್ತು ರಾಜತಾಂತ್ರಿಕ ಮಾರ್ಗವೇ ಸೂಕ್ತ ಎಂಬುದು ಈ ಹಿಂದಿನಿಂದಲೂ ನಮ್ಮ ನಿಲುವಾಗಿದೆ. ಇವತ್ತು ಮಂಡಿಸಲಾದ ನಿರ್ಣಯ ಒಳಗೊಂಡಿರುವ ವಿಷಯವನ್ನು ನಾವು ಗಮನಿಸಿದ್ದೇವೆ. ಆದರೆ ಶಾಶ್ವತ ಶಾಂತಿಯನ್ನು ಭದ್ರಪಡಿಸುವ ನಮ್ಮ ಅಪೇಕ್ಷಿತ ಗುರಿಯನ್ನು ತಲುಪುವಲ್ಲಿ ಅದರ ಅಂತರ್ಗತ ಮಿತಿಗಳನ್ನು ಗಮನಿಸಿ, ನಾವು ಮತದಾನದಿಂದ ದೂರ ಉಳಿಯುವ ಅನಿವಾರ್ಯತೆಯಿದೆ’ ಎಂದರು.

ಎರಡೂ ಕಡೆಯವರಿಗೆ ಸ್ವೀಕಾರಾರ್ಹವಾದ ಪರಿಹಾರದ ಸಮೀಪದಲ್ಲಿ ನಾವು ಇದ್ದೇವೆಯೇ? ಎರಡೂ ಪಕ್ಷಗಳನ್ನು ಒಳಗೊಂಡಿರದ ಯಾವುದೇ ಪ್ರಕ್ರಿಯೆಯು ನಂಬಲರ್ಹ ಮತ್ತು ಅರ್ಥಪೂರ್ಣ ಪರಿಹಾರಕ್ಕೆ ಕಾರಣವಾಗಬಹುದೇ ? ಎಂದವರು ಪ್ರಶ್ನಿಸಿದರು. ವಿಶ್ವಸಂಸ್ಥೆ ವ್ಯವಸ್ಥೆ, ನಿರ್ದಿಷ್ಟವಾಗಿ ಅದರ ಅಂಗವಾದ ವಿಶ್ವಸಂಸ್ಥೆ ಭದ್ರತಾ ಮಂಡಳಿಯು 1945ರ ಜಾಗತಿಕ ರಚನೆಯನ್ನು ಆಧರಿಸಿದೆ. ಇದು ಸಮಕಾಲೀನ ಜಾಗತಿಕ ಶಾಂತಿ ಮತ್ತು ಭದ್ರತೆಗೆ ಎದುರಾಗಿರುವ ಸವಾಲುಗಳನ್ನು ಉತ್ತರಿಸಲು ಪರಿಣಾಮಕಾರಿಯಾಗಿದೆಯೇ ? ಎಂದು ರುಚಿರಾ ಕಾಂಬೋಜ್ ಪ್ರಶ್ನಿಸಿದ್ದಾರೆ.

ರಶ್ಯವು ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಬಳಿಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತ ಮೂರು ನಿರ್ಣಯಕ್ಕೆ ಸಂಬಂಧಿಸಿದ ಮತದಾನದಿಂದ ಭಾರತ ದೂರ ಉಳಿದಿದೆ.

Similar News