ನಾನು ಕಳಪೆ ಫಾರ್ಮ್‌ನಲ್ಲಿದ್ದಾಗ ಧೋನಿ ಮಾತ್ರ ಧೈರ್ಯ ತುಂಬಿದ್ದರು: ವಿರಾಟ್ ಕೊಹ್ಲಿ
ಹೊಸದಿಲ್ಲಿ, ಫೆ.25: ಭಾರತದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಸೆಪ್ಟಂಬರ್‌ನಲ್ಲಿ ನಡೆದ ಏಶ್ಯಕಪ್ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಶತಕ ಗಳಿಸುವ ಮೂಲಕ ಸುಮಾರು ಮೂರು ವರ್ಷಗಳಿಂದ ಕಾಡುತ್ತಿದ್ದ ರನ್ ಬರದಿಂದ ಹೊರಬಂದಿದ್ದರು. ನಾನು ಕಳಪೆ ಪ್ರದರ್ಶನ ನೀಡುತ್ತಿದ್ದಾಗ ಎಂ.ಎಸ್. ಧೋನಿ ಮಾತ್ರ ನನಗೆ ಧೈರ್ಯ ತುಂಬಿದ್ದರು ಎಂದು ಕೊಹ್ಲಿ ಹೇಳಿದ್ದಾರೆ.
ಕೊಹ್ಲಿ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 113 ರನ್ ಗಳಿಸಿದ್ದ ಕೊಹ್ಲಿ ಈ ವರ್ಷದ ಜನವರಿಯಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಸತತ ಎರಡು ಶತಕ(113 ಹಾಗೂ ಔಟಾಗದೆ 166 ರನ್)ಗಳಿಸಿದ್ದರು. ಭಾರತದ ವಿಶ್ವಕಪ್ ವಿಜೇತ ನಾಯಕ ಧೋನಿ ಅವರೊಂದಿಗಿನ ಉತ್ತಮ ಬಾಂಧವ್ಯವನ್ನು ಹಂಚಿಕೊಂಡ ಕೊಹ್ಲಿ,
‘‘ನಾನು ಕಳಪೆ ಪ್ರದರ್ಶನ ನೀಡುತ್ತಿದ್ದ ಸಮಯದಲ್ಲಿ ನನ್ನ ಬಾಲ್ಯದ ಕೋಚ್ ಹಾಗೂ ಕುಟುಂಬವನ್ನು ಹೊರತುಪಡಿಸಿ ನನಗೆ ಧೈರ್ಯ ತುಂಬಿದ ಏಕೈಕ ವ್ಯಕ್ತಿ ಎಂ.ಎಸ್. ಧೋನಿ ಎಂದರು. 2022ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಕೊಹ್ಲಿ ದಿಢೀರನೆ ಟೆಸ್ಟ್ ನಾಯಕತ್ವ ತ್ಯಜಿಸಿದ್ದರು. ಆಗ ಧೋನಿ ಮಾತ್ರ ನನಗೆ ಸಂದೇಶ ಕಳುಹಿಸಿದ್ದಾಗಿ ಕೊಹ್ಲಿ ಈ ಹಿಂದೆ ಬಹಿರಂಗಪಡಿಸಿದ್ದರು. ಕೊಹ್ಲಿ ಅವರು 2008ರಿಂದ 2019ರ ತನಕ 11 ವರ್ಷಗಳ ಕಾಲ ಧೋನಿಯೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದಾರೆ.