×
Ad

ಸ್ಟ್ರಾಂಡ್ಜಾ ಸ್ಮಾರಕ ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿ: ಅನಾಮಿಕಾ, ಅನುಪಮಾ ಫೈನಲ್‌ಗೆ

Update: 2023-02-25 23:25 IST

ಸೋಫಿಯಾ, ಫೆ.25: ಬಲ್ಗೇರಿಯದ ಸೋಫಿಯಾದಲ್ಲಿ ಈಗ ನಡೆಯುತ್ತಿರುವ 74ನೇ ಆವೃತ್ತಿಯ ಸ್ಟ್ರಾಂಡ್ಜಾ ಸ್ಮಾರಕ ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ 2022ರ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ವಿಜೇತ ಜೋಡಿ ಅನಾಮಿಕಾ ಹಾಗೂ ಅನುಪಮಾ ಸ್ಮರಣೀಯ ಗೆಲುವು ದಾಖಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

50 ಕೆಜಿ ವಿಭಾಗದಲ್ಲಿ ಅನಾಮಿಕಾ ಅವರು ಫ್ರಾನ್ಸ್‌ನ ವಸ್ಸಿಲಾ ವಿರುದ್ಧ ಎಚ್ಚರಿಕೆಯ ಆರಂಭ ಪಡೆದರು. 2ನೇ ಸುತ್ತಿನಲ್ಲಿ ಮರು ಹೋರಾಟ ನೀಡಿದರು. ತನ್ನ ಚುರುಕಿನ ಚಲನೆಯ ಲಾಭ ಪಡೆದು 2 ಬಾರಿಯ ಇಯುಬಿಸಿಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತ ಬಾಕ್ಸರನ್ನು 4-1 ಅಂತರದಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದರು. ರವಿವಾರದ ಫೈನಲ್‌ನಲ್ಲಿ ಚೀನಾದ ಹು ಮೆಯಿ ಅವರನ್ನು ಎದುರಿಸಲಿದ್ದಾರೆ.

ಅತ್ಯಂತ ಪೈಪೋಟಿಯಿಂದ ಕೂಡಿದ್ದ 81 ಕೆಜಿ ವಿಭಾಗದ ಮತ್ತೊಂದು ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯದ ಜೆಸ್ಸಿಕಾ ಬಗ್ಲೆ ಅವರನ್ನು 3-2 ಅಂತರದಿಂದ ಮಣಿಸಿದ ಅನುಪಮಾ ಅವರು ಫೈನಲ್‌ಗೆ ತಲುಪಿದರು. ಫೈನಲ್‌ನಲ್ಲಿ ಆಸ್ಟ್ರೇಲಿಯದ ಎಮ್ಮಾ-ಸುಯ್ ಗ್ರೀನ್‌ಟ್ರೀ ಅವರನ್ನು ಎದುರಿಸಲಿದ್ದಾರೆ. ಇನ್ನುಳಿದ ಸೆಮಿ ಫೈನಲ್‌ಗಳಲ್ಲಿ ಎಸ್.ಕಲೈವಾಣಿ, ಶೃತಿ ಯಾದವ್ ಹಾಗೂ ಮೋನಿಕಾ ಅವರು ಉತ್ತಮ ಪ್ರಯತ್ನದ ಹೊರತಾಗಿಯೂ 0-5 ಅಂತರದಿಂದ ಸೋಲನುಭವಿಸಿ ಸ್ಪರ್ಧಾವಳಿಯಿಂದ ನಿರ್ಗಮಿಸಿದರು.

Similar News