×
Ad

ಒಂದೇ ಓವರ್‌ನಲ್ಲಿ ಉರುಳಿದ 5 ವಿಕೆಟ್‌ಗಳು!

Update: 2023-02-26 23:58 IST

ಬೆಲರೈವ್ (ಆಸ್ಟ್ರೇಲಿಯ), ಫೆ. 26: ಆಸ್ಟ್ರೇಲಿಯದ ದೇಶಿ ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ, ಕೊನೆಯ ಓವರ್‌ನಲ್ಲಿ ಐದು ವಿಕೆಟ್‌ಗಳು ಉರುಳಿ ಬೌಲಿಂಗ್ ಮಾಡುತ್ತಿದ್ದ ತಂಡವು ಅಮೋಘ ವಿಜಯವೊಂದನ್ನು ದಾಖಲಿಸಿರುವುದು ವರದಿಯಾಗಿದೆ.

ಮಹಿಳಾ ನ್ಯಾಶನಲ್ ಕ್ರಿಕೆಟ್ ಲೀಗ್ (ಡಬ್ಲ್ಯುಎನ್‌ಸಿಎಲ್) ಪಂದ್ಯಾವಳಿಯ ಫೈನಲ್‌ನಲ್ಲಿ ಇದು ಸಂಭವಿಸಿದೆ. ಈ ಪಂದ್ಯದಲ್ಲಿ ಟಾಸ್ಮೇನಿಯ ತಂಡವು ಸೌತ್ ಆಸ್ಟ್ರೇಲಿಯವನ್ನು ಡಕ್‌ವರ್ತ್-ಲೂಯಿಸ್ ನಿಯಮದಡಿ ರೋಮಾಂಚಕವಾಗಿ ಒಂದು ರನ್‌ನಿಂದ ಸೋಲಿಸಿತು.

ಶನಿವಾರ ನಡೆದ 50 ಓವರ್‌ಗಳ ಹಗಲು-ರಾತ್ರಿ ಪಂದ್ಯದಲ್ಲಿ ಸೌತ್ ಆಸ್ಟ್ರೇಲಿಯಕ್ಕೆ ಆರು ಎಸೆತಗಳಲ್ಲಿ ನಾಲ್ಕು ರನ್‌ಗಳನ್ನು ಗಳಿಸುವ ಪರಿಷ್ಕೃತ ಗುರಿಯನ್ನು ನೀಡಲಾಗಿತ್ತು ಹಾಗೂ ಅದು 
ಐದು ವಿಕೆಟ್‌ಗಳನ್ನು ಹೊಂದಿತ್ತು. ಆದರೆ, ವೇಗಿ ಸಾರಾ ಕಾಯ್ಟ್ ಎಸೆದ ಆ ಕೊನೆಯ ಓವರ್‌ನಲ್ಲಿ ಎರಡು ರನೌಟ್‌ಗಳು ಸೇರಿದಂತೆ ಐದು ವಿಕೆಟ್‌ಗಳು  ಉರುಳಿದವು ಹಾಗೂ ಪಂದ್ಯದ ಫಲಿತಾಂಶ ತಲೆಕೆಳಗಾಯಿತು.

ಟಾಸ್ಮೇನಿಯ ಬೆನ್ನು ಬೆನ್ನಿಗೆ ಎರಡು ಡಬ್ಲ್ಯುಎನ್‌ಸಿಎಲ್ ಪ್ರಶಸ್ತಿಗಳನ್ನು ಪಡೆದ ಎರಡನೇ ತಂಡವಾಯಿತು. ಸೌತ್ ಆಸ್ಟ್ರೇಲಿಯವು ಸತತ ಎರಡನೇ ಬಾರಿಗೆ ದ್ವಿತೀಯ ಸ್ಥಾನಿಯಾಯಿತು.

Similar News