ಫಿಫಾ ವರ್ಷದ ಆಟಗಾರ ಪ್ರಶಸ್ತಿಗೆ ಮೆಸ್ಸಿ ಆಯ್ಕೆ

Update: 2023-02-28 02:45 GMT

ಪ್ಯಾರೀಸ್: ಅರ್ಜೆಂಟೀನಾಗೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಲಿಯೋನಲ್ ಮೆಸ್ಸಿ ಫೆಡರೇಷನ್ ಇಂಟರ್‍ನ್ಯಾಷನಲ್ ಡೆ ಫುಟ್‍ಬಾಲ್ ಅಸೋಸಿಯೇಶನ್ (ಫಿಫಾ) ನೀಡುವ ವರ್ಷದ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮಂಗಳವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೆಸ್ಸಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಳೆದ ವರ್ಷ ಕತಾರ್ ನಲ್ಲಿ  ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಅರ್ಜೆಂಟೀನಾ ತಂಡಕ್ಕೆ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಮೆಸ್ಸಿ ನಿರ್ಣಾಯಕ ಪಾತ್ರ ವಹಿಸಿದ್ದರು. ಅವರ ಪ್ಯಾರೀಸ್ ಸೈಂಟ್ ಜೆರ್ಮಿನ್ (ಪಿಎಸ್‍ಜಿ) ಸಹ ಆಟಗಾರ ಕಿಲಿಯನ್ ಎಂಬಾಪ್ಪೆ ಮತ್ತು ರಿಯಲ್ ಮ್ಯಾಡ್ರಿಡ್ ನಾಯಕ ಕರೀಂ ಬೆಂಝೆಮಾ ಪ್ರಶಸ್ತಿ ಸುತ್ತಿಗೆ ಮೆಸ್ಸಿ ಜತೆ ನಾಮನಿರ್ದೇಶನಗೊಂಡಿದ್ದರು.

2021ರ ಆಗಸ್ಟ್ 8 ರಿಂದ 2022ರ ಡಿಸೆಂಬರ್ 18ರವರೆಗಿನ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮೆಸ್ಸಿ ಫಿಫಾ ಉತ್ತಮ ಆಗಾರ ಪ್ರಶಸ್ತಿಗೆ ಅಯ್ಕೆಯಾಗಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ರಾಬರ್ಟ್ ಲೆಂಡೋನ್ಸ್ಕಿ ಅವರ ಸಾಧನೆಯನ್ನು ಸರಿಗಟ್ಟಿರುವ ಪಿಎಸ್‍ಜಿ ಸುಪರ್ ಸ್ಟಾರ್ ಪ್ಯಾರೀಸ್‍ನಲ್ಲಿ ಎರಡನೇ ಬಾರಿಗೆ ಈ ಪ್ರಶಸ್ತಿಗೆ ಭಾಜನರಾದರು.

2007ರಲ್ಲಿ ಮೊದಲ ಬಾರಿಗೆ ಫಿಫಾ ಗಾಲಾದಲ್ಲಿ ಕಾಣಿಸಿಕೊಂಡಿದ್ದ ಬಾರ್ಸಿಲೋನಾದ ಮಾಜಿ ನಾಯಕ ಆಗ ಎರಡನೇ ಸ್ಥಾನ ಗಳಿಸಿದ್ದರು. ಕಾಕಾ ಆ ವರ್ಷ ಪ್ರಶಸ್ತಿ ಪಡೆದಿದ್ದರು. ಹದಿನೈದು ವರ್ಷದ ಬಳಿಕ ಬಾರ್ಸಿಲೋನಾದ ಮಾಜಿ ನಾಯಕ ಏಳನೇ ಬಾರಿಗೆ ಫಿಫಾ ಪ್ಲೇಯರ್ ಆಫ್ ದ ಈಯರ್ ಪ್ರಶಸ್ತಿ ಗಳಿಸಿದರು. 2009, 2010, 2011, 2012, 2015, 2019 ಮತ್ತು 2023ರಲ್ಲಿ ಮೆಸ್ಸಿ ಈ ಕಿರೀಟಕ್ಕೆ ಭಾಜನರಾಗಿದ್ದಾರೆ.

Similar News