ದ್ವಿತೀಯ ಟೆಸ್ಟ್: ಇಂಗ್ಲೆಂಡ್ ತಂಡವನ್ನು 1 ರನ್‌ನಿಂದ ರೋಚಕವಾಗಿ ಮಣಿಸಿದ ನ್ಯೂಝಿಲ್ಯಾಂಡ್

ಫಾಲೋ ಆನ್ ಗೆ ಸಿಲುಕಿದ ನಂತರ ಜಯ ಸಾಧಿಸಿದ 3ನೇ ತಂಡ ಕಿವೀಸ್

Update: 2023-02-28 05:00 GMT

ವೆಲ್ಲಿಂಗ್ಟನ್:   ಫಾಲೋ-ಆನ್‌ಗೆ  ಸಿಲುಕಿದ್ದರೂ  ಕೂಡ ನ್ಯೂಝಿಲ್ಯಾಂಡ್ ಮಂಗಳವಾರ ಕೊನೆಗೊಂಡ  ಎರಡನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ಅನ್ನು ಕೇವಲ ಒಂದು ರನ್‌ನಿಂದ ರೋಚಕವಾಗಿ ಸೋಲಿಸಿ ಸರಣಿಯನ್ನು ಡ್ರಾ ಮಾಡಿಕೊಂಡಿತು.

ಈ ಗೆಲುವಿನೊಂದಿಗೆ ನ್ಯೂಝಿಲ್ಯಾಂಡ್  ಫಾಲೋ ಆನ್  ನಂತರ ಟೆಸ್ಟ್ ಪಂದ್ಯವನ್ನು ಗೆದ್ದ ಮೂರನೇ ತಂಡ (ಇಂಗ್ಲೆಂಡ್ ಹಾಗೂ  ಭಾರತದ ನಂತರ)ಎಂಬ ಹಿರಿಮೆಗೆ ಪಾತ್ರವಾಗಿದೆ. ಫಾಲೋ ಆನ್‌ಗೆ  ಸಿಲುಕಿದ ನಂತರ ತಂಡವೊಂದು ಟೆಸ್ಟ್ ಗೆದ್ದ ನಾಲ್ಕನೇ ನಿದರ್ಶನ ಇದಾಗಿದೆ. 1894 ಹಾಗೂ  1981 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಎರಡು ಬಾರಿ ಈ ಸಾಧನೆ ಮಾಡಿತ್ತು. ಭಾರತ 2001 ರಲ್ಲಿ ಆಸ್ಟ್ರೇಲಿಯವನ್ನು ಸೋಲಿಸಿತ್ತು.

ನ್ಯೂಝಿಲ್ಯಾಂಡ್ ತಂಡ ಇಂಗ್ಲೆಂಡ್‌ಗೆ ಗೆಲ್ಲಲು 258 ರನ್‌ಗಳ ಗುರಿಯನ್ನು ನೀಡಿತ್ತು, ಆದರೆ  ಇಂಗ್ಲೆಂಡ್ ತಂಡ 256 ರನ್‌ಗಳಿಗೆ ಆಲೌಟ್ ಆಯಿತು. ನಾಟಕೀಯ ತಿರುವಿನಲ್ಲಿ2 ಪಂದ್ಯಗಳ  ಸರಣಿಯು 1-1ರಿಂದ ಸಮಬಲವಾಯಿತು.

ನ್ಯೂಝಿಲ್ಯಾಂಡ್  ಅನ್ನು ಮೊದಲ ಇನಿಂಗ್ಸ್ ನಲ್ಲಿ 209 ಕ್ಕೆ ಆಲೌಟ್ ಮಾಡಿದ ನಂತರ  ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ಅನ್ನು 435-8 ಕ್ಕೆ ಡಿಕ್ಲೇರ್ ಮಾಡುವ ಮೂಲಕ ಗೆಲುವಿನ ಹಾದಿಯಲ್ಲಿತ್ತು.

ಮಾಜಿ ನಾಯಕ ಕೇನ್ ವಿಲಿಯಮ್ಸನ್ ಸೋಮವಾರ ಅಮೋಘ 132 ರನ್‌ಗಳೊಂದಿಗೆ ನ್ಯೂಝಿಲ್ಯಾಂಡ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 483 ರನ್‌ ಗಳಿಸಿ ಪಂದ್ಯದಲ್ಲಿ ಮರು ಹೋರಾಟ ನೀಡಲು ನೆರವಾದರು.

1 ವಿಕೆಟ್ ನಷ್ಟಕ್ಕೆ 48 ರನ್ ನಿಂದ 2ನೇ ಇನಿಂಗ್ಸ್ ಮುಂದುವರಿಸಿದ  ಇಂಗ್ಲೆಂಡ್ ಮಂಗಳವಾರ ಬೆಳಿಗ್ಗೆ ಕೇವಲ 27 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ತತ್ತರಿಸಿತು.  ಜೋ ರೂಟ್ ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ ರೂಟ್ ಅವರು ತಂಡಕ್ಕೆ ಗೆಲುವು ತಂದುಕೊಡಲಿಲ್ಲ.

Similar News