ಭೀಕರ ಪ್ರವಾಹಕ್ಕೆ ತತ್ತರಿಸಿದ ಮಲೇಶ್ಯಾ: ಒಬ್ಬ ಮೃತ್ಯು; 26,000 ಜನರ ಸ್ಥಳಾಂತರ‌

Update: 2023-03-02 17:33 GMT

ಕೌಲಲಾಂಪುರ, ಮಾ.2: ಬುಧವಾರದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. 26,000ಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ಸಿಂಗಾಪುರದ ಗಡಿಗೆ ಹೊಂದಿಕೊಂಡಿರುವ ಜೊಹೊರ್ ರಾಜ್ಯದಲ್ಲಿ ಪ್ರವಾಹ ಸ್ಥಿತಿ ಗಂಭೀರವಾಗಿದ್ದು ಹಲವೆಡೆ ಮನೆಗಳು ನೀರಿನಲ್ಲಿ ಮುಳುಗಿವೆ. ‌

ಜನರು ಮನೆಯ ಛಾವಣಿಯಲ್ಲಿ ಆಶ್ರಯ ಪಡೆದಿದ್ದು ಅವರನ್ನು ರಕ್ಷಣಾ ತಂಡ ದೋಣಿಗಳ ಮೂಲಕ ರಕ್ಷಿಸಿದೆ. ಸುಮಾರು 25,000 ಜನರನ್ನು ಶಾಲೆ ಮತ್ತು ಸಮುದಾಯ ಸಭಾಭವನದಲ್ಲಿ ತೆರೆದಿರುವ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಜಲಾವೃತಗೊಂಡಿದ್ದ ರಸ್ತೆಯಲ್ಲಿ ಸಾಗುತ್ತಿದ್ದ ಕಾರೊಂದು ನೆರೆನೀರಿನಲ್ಲಿ ಕೊಚ್ಚಿಹೋಗಿದ್ದು ಕಾರಿನ ಚಾಲಕ ಮೃತಪಟ್ಟಿದ್ದಾನೆ. ಇತರ 5 ರಾಜ್ಯಗಳಲ್ಲೂ ಪ್ರವಾಹಸ್ಥಿತಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲೇಶ್ಯಾದಲ್ಲಿ ನವೆಂಬರ್ನಿಂದ ಆರಂಭಗೊಂಡಿರುವ ವಾರ್ಷಿಕ ಮುಂಗಾರು ಅವಧಿ ಎಪ್ರಿಲ್ವರೆಗೂ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಜಲಾವೃತಗೊಂಡಿದ್ದ ಪ್ರದೇಶದ ಮನೆಯೊಂದರಿಂದ ಸಣ್ಣ ಮಗುವನ್ನು ಬಕೆಟ್ನಲ್ಲಿ ಇರಿಸಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಎರಡು ದಿನದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ದೇಶದಾದ್ಯಂತ 25 ನದಿಗಳ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನವೆಂಬರ್ನಿಂದ ದೇಶದ ಹಲವೆಡೆ ಭೂಕುಸಿತದ 102 ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Similar News