ಬೆಲಾರಸ್: ನೊಬೆಲ್ ಪ್ರಶಸ್ತಿ ಪುರಸ್ಕೃತ ವ್ಯಕ್ತಿಗೆ 10 ವರ್ಷ ಜೈಲುಶಿಕ್ಷೆ

Update: 2023-03-03 17:39 GMT

ಮಿಂಸ್ಕ್, ಮಾ.3: ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕೃತ್ಯಗಳಿಗೆ ಹಣಕಾಸಿನ ನೆರವು ಒದಗಿಸಿದ ಹಾಗೂ ಸ್ಮಗ್ಲಿಂಗ್ ಆರೋಪದಲ್ಲಿ ಬೆಲಾರಸ್ ನ ಪ್ರಮುಖ ಮಾನವಹಕ್ಕು ಪ್ರತಿಪಾದಕ ಮತ್ತು 2022ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಅಲೆಸ್ ಬಿಯಾಲಿಯಟ್ಸ್ಕಿಗೆ ಬೆಲಾರಸ್ ನ ನ್ಯಾಯಾಲಯ ಶುಕ್ರವಾರ 10 ವರ್ಷದ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬಿಯಾಲಿಯಟ್ಸ್ಕಿ ಸ್ಥಾಪಿಸಿದ ವಿಯಾಸ್ನ ಮಾನವಹಕ್ಕುಗಳ ಸಂಸ್ಥೆಯ ಇತರ ಮೂರು ಉನ್ನತ ಅಧಿಕಾರಿಗಳಿಗೂ ಜೈಲುಶಿಕ್ಷೆ ವಿಧಿಸಲಾಗಿದೆ. ವಲಿಯಾಂಟ್ಸಿನ್ ಸ್ಟೆಫಾನೊವಿಚ್ ಗೆ 9 ವರ್ಷದ ಶಿಕ್ಷೆ, ಉಲದ್ಝಿಮಿರ್ ಲಬ್ಕೋವಿಕ್ಸ್ಗೆ 7 ವರ್ಷದ ಶಿಕ್ಷೆ ಹಾಗೂ ಡಿಮಿಟ್ರಿ ಸಲ್ಯುಯೋವ್ ಗೆ 8 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ. 2020ರ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆಸುವ ಮೂಲಕ ಬೆಲಾರಸ್ ನ ಸರ್ವಾಧಿಕಾರಿ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ ಮತ್ತೊಂದು ಅವಧಿಗೆ ಅಧಿಕಾರ ಪಡೆದಿದ್ದಾರೆ ಎಂದು ದೇಶದಾದ್ಯಂತ ಭುಗಿಲೆದ್ದ ಪ್ರತಿಭಟನೆಗೆ ಬಿಯಾಲಿಯಟ್ಸ್ಕಿ ಹಾಗೂ ಇತರ ಮೂವರು ಬೆಂಬಲ ನೀಡಿದ್ದರು ಎಂಬ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು.

ಬಿಯಾಲಿಯಟ್ಸ್ಕಿ, ವಲಿಯಾಂಟ್ಸಿನ್ ಸ್ಟೆಫಾನೊವಿಚ್ ಮತ್ತು ಉಲದ್ಝಿಮಿರ್ ಲಬ್ಕೋವಿಕ್ಸ್ರನ್ನು ಅಧಿಕಾರಿಗಳು ಬಂಧಿಸಿದ್ದರು. ಆದರೆ ಬಂಧನದಿಂದ ತಪ್ಪಿಸಿಕೊಂಡಿದ್ದ ಸಲ್ಯುಯೋವ್ ವಿದೇಶಕ್ಕೆ ಪಲಾಯನ ಮಾಡಿದ್ದರು. ರಹಸ್ಯವಾಗಿ ನಡೆದಿದ್ದ ವಿಚಾರಣೆ ಸಂದರ್ಭ ಬಿಯಾಲಿಯಟ್ಸ್ಕಿ ಹಾಗೂ ಇತರ ಇಬ್ಬರನ್ನು ನ್ಯಾಯಾಲಯದ ಆವರಣದಲ್ಲಿ ಪಂಜರದಂತಹ ಕೋಣೆಯಲ್ಲಿ ಇರಿಸಲಾಗಿತ್ತು. ವಿಚಾರಣೆಯ ನೆಪದಲ್ಲಿ 21 ತಿಂಗಳು ಜೈಲಿನಲ್ಲಿ ಬಂಧಿಯಾಗಿದ್ದ ಈ ಮೂವರಿಗೆ ಜೈಲುಶಿಕ್ಷೆ ವಿಧಿಸಿರುವುದನ್ನು ವ್ಯಾಪಕವಾಗಿ ಖಂಡಿಸಲಾಗಿದೆ.

ಈ ನಾಚಿಕೆಗೇಡಿನ ಅನ್ಯಾಯದ ವಿರುದ್ಧ ಹೋರಾಡಲು ಮತ್ತು ಅವರನ್ನು ಬಂಧಮುಕ್ತಗೊಳಿಸಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡಬೇಕಾಗಿದೆ ಎಂದು ದೇಶಭ್ರಷ್ಟರಾಗಿರುವ ಬೆಲಾರಸ್ ವಿಪಕ್ಷ ಮುಖಂಡ ಸ್ವಿಯಟ್ಲಾನಾ ಸಿಖನೌಸ್ಕಾಯ ಪ್ರತಿಕ್ರಿಯಿಸಿದ್ದಾರೆ.

Similar News