ಎಲ್ನಿನೊ ಮರುಕಳಿಸುವ ಸಾಧ್ಯತೆ: ಜಾಗತಿಕ ತಾಪಮಾನ ಮತ್ತಷ್ಟು ಹೆಚ್ಚುವ ನಿರೀಕ್ಷೆ

Update: 2023-03-03 17:48 GMT

ಲಂಡನ್, ಮಾ.3: ಮುಂಬರುವ ತಿಂಗಳುಗಳಲ್ಲಿ ಎಲ್ನಿನೊ ಮತ್ತೆ ಮರುಕಳಿಸುವ ನಿರೀಕ್ಷೆಯಿದ್ದು ಜಾಗತಿಕ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ.

ಎಲ್ನಿನೊ ಎಂಬುದು ಹವಾಮಾನದ ಮಾದರಿಯಾಗಿದ್ದು ಪೂರ್ವ ಉಷ್ಣವಲಯದ ಪೆಸಿಫಿಕ್ ಸಾಗರದಲ್ಲಿ ಮೇಲ್ಮೈ ನೀರಿನ ಅಸಾಮಾನ್ಯ ತಾಪಮಾನವನ್ನು ವಿವರಿಸುತ್ತದೆ. ಎಲ್ನಿನೊ ಎಂದರೆ ಎಲ್ನಿನೊ ಸದರ್ನ್ ಅಸಿಲೇಷನ್(ಎನ್ಸೊ) ಎಂಬ ಭಾರೀ ತಾಪಮಾನದ ಪ್ರಕ್ರಿಯೆಯಾಗಿದೆ. ಎಲ್ನಿನೊ ಘಟನೆಯು ಸತತ ಮೂರು ವರ್ಷಗಳ ಅಸಾಮಾನ್ಯ, ನಿರಂತರ ಮತ್ತು ಸುದೀರ್ಘವಾದ ಲಾ ನಿನಾದ ನಂತರದ ಬೆಳವಣಿಗೆಯಾಗಿರಬಹುದು.

ಇದು ಪ್ರಪಂಚದ ವಿವಿಧೆಡೆ ತಾಪಮಾನ ಮತ್ತು ಮಳೆಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ವಹವಾಮಾನ ಸಂಸ್ಥೆ ಹೇಳಿದೆ. ಬಹುತೇಕ ಮಾರ್ಚ್-ಮೇ ಅವಧಿಯಲ್ಲಿ ಎಲ್ನಿನೊ ಮರುಕಳಿಸಬಹುದು. ಎಲ್ನಿನೊದ ಬೆಳವಣಿಗೆ ವರ್ಷದ ಪ್ರಥಮಾರ್ಧದಲ್ಲಿ ಕನಿಷ್ಟ ಮಟ್ಟದಲ್ಲಿದ್ದರೆ, ಎಪ್ರಿಲ್-ಜೂನ್ ಅವಧಿಯಲ್ಲಿ 15%ಕ್ಕೆ ಮತ್ತು  ಕ್ರಮೇಣ ಮೇ-ಜುಲೈ ಅವಧಿಯಲ್ಲಿ 35%ಕ್ಕೆ ಹೆಚ್ಚಬಹುದು. ಜೂನ್-ಆಗಸ್ಟ್ ಅವಧಿಯಲ್ಲಿ 55%ಕ್ಕೆ ಹೆಚ್ಚುವ ಸಾಧ್ಯತೆಯಿದೆ.

ಲಾ ನಿನಾದ  ತಂಪಾಗಿಸುವ ಪರಿಣಾಮವು ಏರುತ್ತಿರುವ ಜಾಗತಿಕ ತಾಪಮಾನಕ್ಕೆ ಬ್ರೇಕ್ ಹಾಕಿತ್ತು. ಆದರೂ ಕಳೆದ 8 ವರ್ಷಗಳ ಅವಧಿಯು ಗರಿಷ್ಟ ತಾಪಮಾನದ ದಾಖಲೆ ಬರೆದಿದೆ. ಈಗ ಮತ್ತೆ ಎಲ್ನಿನೊ ಮರುಕಳಿಸಿದರೆ, ಇದು ಜಾಗತಿಕ ತಾಪಮಾನದಲ್ಲಿ ಮತ್ತೊಂದು ಉಲ್ಬಣಕ್ಕೆ ಕಾರಣವಾಗಲಿದೆ ಎಂದು ವಿಶ್ವಹವಾಮಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪೀಟರ್ ತಾಲಾಸ್ ಹೇಳಿದ್ದಾರೆ.

ಕೇಂದ್ರ ಮತ್ತು ಪೂರ್ವ ಸಮಭಾಜಕ ಪೆಸಿಫಿಕ್ ಮಹಾಸಾಗರದಲ್ಲಿ ಉಷ್ಣವಲಯದ ವಾತಾವರಣದಲ್ಲಿನ ಪರಿಚಲನೆಯಲ್ಲಿನ ಬದಲಾವಣೆಗಳೊಂದಿಗೆ ಸಮುದ್ರದ ಮೇಲ್ಮೈ ತಾಪಮಾನ ದೊಡ್ಡ ಪ್ರಮಾಣದಲ್ಲಿ ತಂಪಾಗುವ ಪ್ರಕ್ರಿಯೆಯನ್ನು ಲಾನಿನಾ ಸೂಚಿಸುತ್ತದೆ. 2016ರಲ್ಲಿ ಎಲ್ನಿನೊ ಮತ್ತು ಹವಾಮಾನ ಬದಲಾವಣೆಯ ಸಂಯೋಜನೆಯಿಂದಾಗಿ 2016ರ ವರ್ಷವು ಅತ್ಯಂತ ಗರಿಷ್ಟ ತಾಪಮಾನದ ವರ್ಷವೆಂದು ದಾಖಲೆಗೆ ಸೇರಿಹೋಗಿದೆ. ಎಲ್ನಿನೊ ಮತ್ತು ಲಾ ನಿನಾ ವಿದ್ಯಮಾನವು ಸ್ವಾಭಾವಿಕವಾಗಿ ಸಂಭವಿಸುತ್ತದೆ. ಆದರೆ ಇದು ಮಾನವಪ್ರೇರಿತ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ನಡೆಯುತ್ತಿದ್ದು ಜಾಗತಿಕ ತಾಪಮಾನವನ್ನು ಹೆಚ್ಚಿಸುತ್ತದೆ ಮತ್ತು ಕಾಲೋಚಿತ ಮಳೆಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಶ್ವಹವಾಮಾನ ಸಂಸ್ಥೆಯ ಹೇಳಿಕೆ ತಿಳಿಸಿದೆ.

Similar News