ಭಾರತದಲ್ಲಿ ಹೊಸ ಹೂಡಿಕೆಗೆ ಖಚಿತ ಒಪ್ಪಂದ ಮಾಡಿಕೊಂಡಿಲ್ಲ: ಫಾಕ್ಸ್ಕಾನ್

Update: 2023-03-04 09:51 GMT

ತೈಪೆ,ಮಾ.4: ತನ್ನ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದನ್ನು ತೈವಾನಿನ ಪ್ರಮುಖ ತಂತ್ರಜ್ಞಾನ ಸಂಸ್ಥೆ ಫಾಕ್ಸ್ಕಾನ್ ಶನಿವಾರ ಒಪ್ಪಿಕೊಂಡಿದೆಯಾದರೂ ತಾನು ಯಾವುದೇ ಬದ್ಧ,ಖಚಿತ ಒಪ್ಪಂದಗಳನ್ನು ಮಾಡಿಕೊಂಡಿರುವುದನ್ನು ನಿರಾಕರಿಸಿದೆ. ಫಾಕ್ಸ್ಕಾನ್ ಭಾರತದಲ್ಲಿ ಹೊಸ ಹೂಡಿಕೆಯನ್ನು ಮಾಡಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕಂಪನಿಯ ಈ ಹೇಳಿಕೆ ಹೊರಬಿದ್ದಿದೆ.

ಫೆ.27ರಿಂದ ಮಾ.4ರವರೆಗೆ ತನ್ನ ಅಧ್ಯಕ್ಷ ಹಾಗೂ ಸಿಇಒ ಯಂಗ್ ಲಿಯು ಅವರ ಭಾರತ ಭೇಟಿ ಸಂದರ್ಭದಲ್ಲಿ ಹೊಸ ಹೂಡಿಕೆಗಳಿಗಾಗಿ ಯಾವುದೇ ಖಚಿತ ಒಪ್ಪಂದವನ್ನು ಮಾಡಿಕೊಂಡಿಲ್ಲ ಎಂದು ಫಾಕ್ಸ್ಕಾನ್ ಹೇಳಿಕೆಯಲ್ಲಿ ತಿಳಿಸಿದೆ.
ಮಾತುಕತೆಗಳು ಮತ್ತು ಆಂತರಿಕ ಪುನರ್ಪರಿಶೀಲನೆ ನಡೆಯುತ್ತಿವೆ. ಮಾಧ್ಯಮಗಳಲ್ಲಿ ಚರ್ಚೆಯಾಗಿರುವ ಹೂಡಿಕೆ ಮೊತ್ತಗಳು ಕಂಪನಿಯು ಬಿಡುಗಡೆ ಮಾಡಿರುವ ಮಾಹಿತಿಯಲ್ಲ ಎಂದು ಅದು ಹೇಳಿದೆ. 

ಪ್ರಸ್ತುತ ವರದಿಯಾಗುತ್ತಿರುವ ಉದ್ಯೋಗಗಳ ಅಂಕಿಅಂಶಗಳು ಕಂಪನಿಯೊಂದಿಗೆ ನೇರ ಉದ್ಯೋಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದೂ ಫಾಕ್ಸ್ಕಾನ್ ಹೇಳಿದೆ. 

ಐಫೋನ್ಗಳ ಪ್ರಮುಖ ತಯಾರಿಕೆ ಕಂಪನಿಯಾಗಿರುವ ಫಾಕ್ಸ್ಕಾನ್ಗೆ ಬೆಂಗಳೂರಿನ ಹೊರವಲಯದಲ್ಲಿ ಜಾಗವನ್ನು ಒದಗಿಸಲಾಗಿದೆ. 300 ಎಕರೆ ವಿಸ್ತೀರ್ಣದ ಈ ಕ್ಯಾಂಪಸ್ ಆ್ಯಪಲ್ ಫೋನ್ಗಳ ಬೃಹತ್ ತಯಾರಿಕೆ ಘಟಕಗಳಲ್ಲಿ ಒಂದಾಗಲಿದೆ ಎಂದು ಮಾಧ್ಯಮಗಳು ಶುಕ್ರವಾರ ವರದಿ ಮಾಡಿದ್ದವು.

ಆ್ಯಪಲ್ ಶೀಘ್ರವೇ ರಾಜ್ಯದಲ್ಲಿಯ ತನ್ನ ನೂತನ ಘಟಕದಲ್ಲಿ ಐಫೋನ್ಗಳನ್ನು ತಯಾರಿಸಲಿದೆ ಮತ್ತು ಇದರಿಂದ ಒಂದು ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕರ್ನಾಟಕದ ಮುಖ್ಯಮತ್ರಿ ಬಸವರಾಜ ಬೊಮ್ಮಾಯಿ ಟ್ವೀಟಿಸಿದ್ದರು. ಫಾಕ್ಸ್ಕಾನ್ ಕರ್ನಾಟಕದ ತನ್ನ ನೂತನ ಘಟಕದಲ್ಲಿ 700 ಮಿಲಿಯ ಡಾ.(ಸುಮಾರು 5,732 ಕೋ.ರೂ.)ಗಳ ಹೂಡಿಕೆಯನ್ನು ಮಾಡಲಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿತ್ತು.

ತೆಲಂಗಾಣದಲ್ಲಿ ಇಲೆಕ್ಟ್ರಾನಿಕ್ಸ್ ತಯಾರಿಕೆ ಘಟಕದ ಸ್ಥಾಪನೆಗಾಗಿ ಲಿಯು ಗುರುವಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಅಲ್ಲಿಯ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರೂ ಟ್ವೀಟಿಸಿದ್ದರು.

ಆ್ಯಪಲ್ ಫೋನ್ಗಳ ತಯಾರಿಕೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿರುವ ಫಾಕ್ಸ್ಕಾನ್,ಈಗಾಗಲೇ ತಮಿಳುನಾಡಿನಲ್ಲಿಯ ತನ್ನ ಘಟಕದಲ್ಲಿ ಇತ್ತಿಚಿನ ಪೀಳಿಗೆಯ ಐಫೋನ್ಗಳನ್ನು ತಯಾರಿಸುತ್ತಿದೆ.

ಇದನ್ನು ಓದಿ: ಸುಳ್ಳು ಸುದ್ದಿಗಳ ಯುಗದಲ್ಲಿ ಸತ್ಯವು 'ಬಲಿಪಶು'ವಾಗಿದೆ: ಸಿಜೆಐ ಚಂದ್ರಚೂಡ್

Similar News