ಅಲ್ಟ್ರಾಮ್ಯಾರಥಾನ್: ಸತತ 23 ದಿನ ಓಡಿ ದಾಖಲೆ ಬರೆದ ಅಮೆರಿಕದ ಮಹಿಳೆ
Update: 2023-03-04 23:03 IST
ವಾಷಿಂಗ್ಟನ್, ಮಾ.4: ಅಲ್ಟ್ರಾಮ್ಯಾರಥಾನ್ ಓಟ ಮುಗಿಸಲು ಸತತ 23 ದಿನ ಓಡುವ ಮೂಲಕ ಅಮೆರಿಕದ ಫ್ಲೋರಿಡಾ ನಿವಾಸಿ ಮೆಗಾನ್ ಕ್ಯಾಸಿಡಿ ಗಿನ್ನೆಸ್ ವಿಶ್ವದಾಖಲೆಗೆ ಪಾತ್ರವಾಗಿದ್ದಾರೆ.
23 ದಿನ ಈಕೆ ಸುಮಾರು 50 ಕಿ.ಮೀ ಓಡಿದ್ದಾರೆ. ಅಲ್ಟ್ರಾಮ್ಯಾರಥಾನ್ ಓಟವನ್ನು 22 ದಿನ ಓಡಿ ಮುಗಿಸಿರುವುದು ಈ ಹಿಂದಿನ ಗಿನ್ನೆಸ್ ವಿಶ್ವದಾಖಲೆ ಆಗಿತ್ತು. `ಅಮೆರಿಕದ ಫ್ಲೋರಿಡಾದ ಓರ್ಲಾಂಡೊ ನಗರದ ನಿವಾಸಿ ಮೆಗಾನ್ ಕ್ಯಾಸಿಡಿ 2022ರ ಡಿಸೆಂಬರ್ 17ರಿಂದ 2023ರ ಜನವರಿ 8ರವರೆಗೆ ಅಲ್ಟ್ರಾಮ್ಯಾರಥಾನ್ ಓಟವನ್ನು ಓಡಿ ಮುಗಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ ಎಂದು ಗಿನ್ನೆಸ್ ವಿಶ್ವದಾಖಲೆ ಸಂಸ್ಥೆಯ ಹೇಳಿಕೆ ತಿಳಿಸಿದೆ.
ಮ್ಯಾರಥಾನ್ ಓಟದಲ್ಲಿ 42.2 ಕಿ.ಮೀ ಓಡಬೇಕು. ಇದಕ್ಕಿಂತ ಹೆಚ್ಚಿನ ದೂರ ಕ್ರಮಿಸುವ ಓಟವನ್ನು ಅಲ್ಟ್ರಾಮ್ಯಾರಥಾನ್ ಎಂದು ಕರೆಯಲಾಗುತ್ತದೆ. ಇದರಲ್ಲಿ 50 ಕಿ.ಮೀ, 100 ಕಿ.ಮೀ, ಅದಕ್ಕಿಂತ ಅಧಿಕ ದೂರವನ್ನು ನಿಗದಿಪಡಿಸಲಾಗುತ್ತದೆ.