ಮಹಿಳೆಯರ ವಿರುದ್ಧದ ತಾಲಿಬಾನ್ ನಿರ್ಬಂಧ: ಮಾನವೀಯತೆಯ ವಿರುದ್ಧದ ಅಪರಾಧಕ್ಕೆ ಸಮ ಎಂದ ವಿಶ್ವಸಂಸ್ಥೆ

Update: 2023-03-06 17:31 GMT

ಜಿನೆವಾ, ಮಾ.6: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮಹಿಳೆಯರು ಮತ್ತು ಬಾಲಕಿಯರನ್ನು ನಡೆಸಿಕೊಳ್ಳುವ ರೀತಿಯು ಮಾನವೀಯತೆಯ ವಿರುದ್ಧದ ಅಪರಾಧ ಆಗಿರುವ ಸಾಧ್ಯತೆಯಿದೆ ಎಂದು ಜಿನೆವಾದಲ್ಲಿ ಮಾನವ ಹಕ್ಕುಗಳ ಮಂಡಳಿಗೆ  ಸೋಮವಾರ ಸಲ್ಲಿಸಿರುವ ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

2021ರ ಆಗಸ್ಟ್ ನಲ್ಲಿ ಅಫ್ಘಾನ್ ಮೇಲೆ ನಿಯಂತ್ರಣ ಸಾಧಿಸಿರುವ ತಾಲಿಬಾನ್, ಪ್ರೌಢಶಾಲೆ ಮತ್ತು ವಿವಿಗಳಲ್ಲಿ ಶಿಕ್ಷಣ ಪಡೆಯುವುದು ಸೇರಿದಂತೆ ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ತೀವ್ರವಾಗಿ ಮೊಟಕುಗೊಳಿಸಿದೆ ಎಂದು ವರದಿಯಾಗಿದೆ.

`ತಾಲಿಬಾನ್ ಮಹಿಳೆಯರು ಮತ್ತು ಬಾಲಕಿಯರನ್ನು ನಡೆಸಿಕೊಳ್ಳುವ ರೀತಿ ಲಿಂಗಶೋಷಣೆಗೆ ಕಾರಣವಾಗಬಹುದು  ಮತ್ತು ಮಾನವೀಯತೆಯ ವಿರುದ್ಧದ ಅಪರಾಧ ಆಗಿರಬಹುದು. ತಾಲಿಬಾನ್‍ನ ಉದ್ದೇಶಪೂರ್ವಕ ಮತ್ತು ಲೆಕ್ಕಾಚಾರದ ನೀತಿಯು ಮಹಿಳೆಯರು ಮತ್ತು ಬಾಲಕಿಯರ ಮಾನವ ಹಕ್ಕುಗಳನ್ನು ನಿರಾಕರಿಸುವುದು ಮತ್ತು ಸಾರ್ವಜನಿಕ ಜೀವನದಿಂದ ಅವರನ್ನು ಅಳಿಸಿ ಹಾಕುವುದಾಗಿದೆ. ಇದು ಲಿಂಗ ಕಿರುಕುಳದ ಅಂತರಾಷ್ಟ್ರೀಯ ಅಪರಾಧಕ್ಕೆ ಕಾರಣವಾಗಬಹುದು. ಇದಕ್ಕಾಗಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬಹುದು ' ಎಂದು  2022ರ ಜುಲೈಯಿಂದ ಡಿಸೆಂಬರ್‍ವರೆಗಿನ ಅವಧಿಗೆ ಸಂಬಂಧಿಸಿದ ವರದಿಯಲ್ಲಿ  ಅಫ್ಘಾನಿಸ್ತಾನಕ್ಕೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯಾಗಿರುವ ರಿಚರ್ಡ್ ಬೆನೆಟ್ ಉಲ್ಲೇಖಿಸಿದ್ದಾರೆ.

ಮಹಿಳೆಯರು ಮತ್ತು ಹುಡುಗಿಯರನ್ನು ಅಸಹನೀಯವಾಗಿ ನಡೆಸಿಕೊಳ್ಳುವುದು ಧರ್ಮ ಸೇರಿದಂತೆ ಯಾವುದೇ ನೆಲೆಯಲ್ಲಿ ಅಸಹನೀಯ ಮತ್ತು ಅಸಮರ್ಥನೀಯವಾಗಿದೆ ಎಂದು ತಾಲಿಬಾನ್‍ಗೆ   ಮಾನವ ಹಕ್ಕುಗಳ ಮಂಡಳಿಯು ಬಲವಾದ ಸಂದೇಶ ರವಾನಿಸಬೇಕು. ಮಹಿಳೆಯರ ಮತ್ತು ಹುಡುಗಿಯರ ಮೇಲಿನ ನಿರ್ಬಂಧಗಳ ಸಂಚಿತ ಪರಿಣಾಮವು ಇಡೀ ಜನಸಂಖ್ಯೆಯ ಮೇಲೆ ವಿನಾಶಕಾರಿ, ದೀರ್ಘಕಾಲೀನ ಪರಿಣಾಮ ಬೀರುತ್ತದೆ ಮತ್ತು ಇದು ಲಿಂಗ ವರ್ಣಭೇದ ನೀತಿಗೆ ಸಮನಾಗಿರುತ್ತದೆ ಎಂದು ಬೆನೆಟ್ ಹೇಳಿದ್ದಾರೆ.

ಮಹಿಳೆಯರು ವಿದೇಶಿ ನೆರವಿನ ಏಜೆನ್ಸಿಯಲ್ಲಿ ಕಾರ್ಯನಿರ್ವಹಿಸುವುದನ್ನು ಡಿಸೆಂಬರ್‍ನಲ್ಲಿ ತಾಲಿಬಾನ್ ನಿಷೇಧಿಸಿದೆ.

Similar News