ಉತ್ತರಪ್ರದೇಶ: ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿಯ ಸಹಚರರ ಮನೆಗಳು ನೆಲಸಮ
ಲಕ್ನೋ,ಮಾ.7: ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ಅಧಿಕಾರಿಗಳು ಮಂಗಳವಾರ ಗ್ಯಾಂಗ್ ಸ್ಟಾರ್ ಪರಿವರ್ತಿತ ರಾಜಕಾರಣಿ ಮುಖ್ತಾರ್ ಅನ್ಸಾರಿಯ ಸಹಚರರಿಗೆ ಸೇರಿದ ಎರಡು ಮನೆಗಳನ್ನು ನೆಲಸಮಗೊಳಿಸಿದ್ದಾರೆ. ಈ ಮನೆಗಳನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂದು ಹೇಳಿರುವ ಅಧಿಕಾರಿಗಳು, ಈ ಸಹಚರರು ಅನ್ಸಾರಿಗೆ ವಾಹನಗಳು ಮತ್ತಿತರ ಬೆಂಬಲಗಳನ್ನು ಒದಗಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ರಫೀಕುಸ್ಮಾದ್ ಮತ್ತು ಇಫ್ತಿಕಾರ್ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳನ್ನು ನೆಲಸಮಗೊಳಿಸಲಾಗಿದೆ. ರಫೀಕುಸ್ಮಾದ್ ಅನ್ಸಾರಿಗೆ ವಾಹನಗಳು ಮತ್ತು ಇತರ ಬೆಂಬಲಗಳನ್ನು ಒದಗಿಸುತ್ತಿದ್ದರೆ, ಇಫ್ತಿಕಾರ್ ಅನ್ಸಾರಿಯ ಕುಟುಂಬಕ್ಕೆ ವಸತಿ ಸೌಲಭ್ಯಗಳನ್ನು ಒದಗಿಸುತ್ತಿದ್ದ. ಈ ಮನೆಗಳಿಂದ ಡಬಲ್ ಬ್ಯಾರೆಲ್ ಬಂದೂಕುಗಳು ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ರಫಿಕುಸ್ಮಾದ್ ನ ಮನೆಯಲ್ಲಿ ಏಳು ಲ.ರೂ.ನಗದು ಹಣವೂ ಪತ್ತೆಯಾಗಿದೆ ಎಂದು ಎಡಿಜಿಪಿ ಪ್ರಶಾಂತ್ ಕುಮಾರ್ ತಿಳಿಸಿದರು.
ಡಬಲ್ ಬ್ಯಾರೆಲ್ ಬಂದೂಕುಗಳು ಮತ್ತು ಅನುಮತಿಸಲ್ಪಟ್ಟಿದ್ದಕ್ಕಿಂತ ಹೆಚ್ಚಿನ ಗುಂಡುಗಳನ್ನು ಹೊಂದಿದ್ದಕ್ಕಾಗಿ ಶಸ್ತ್ರಾಸ್ತ್ರ ಪರವಾನಿಗೆಗಳನ್ನು ರದ್ದುಗೊಳಿಸಲು ಕ್ರಮವನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಗಾಝಿಪುರ ಜಿಲ್ಲಾಡಳಿತವು ರವಿವಾರ ಅನ್ಸಾರಿಯ ಸಹಾಯಕ ಕಮಲೇಶ ಸಿಂಗ್ ಎಂಬಾತನ ಕಟ್ಟಡವನ್ನು ನೆಲಸಮಗೊಳಿಸಿತ್ತು. ಅನ್ಸಾರಿಯ ಪುತ್ರರಾದ ಅಬ್ಬಾಸ್ ಮತ್ತು ಉಮರ್ ಅನ್ಸಾರಿ ಮವು ಜಿಲ್ಲೆಯ ಜಹಾಂಗೀರ್ಪುರದಲ್ಲಿ ನಿರ್ಮಿಸಿದ್ದ ಎರಡಂತಸ್ತಿನ ಮನೆಯನ್ನೂ ಅಧಿಕಾರಿಗಳು ನೆಲಸಮಗೊಳಿಸಿದ್ದರು.
ಅನ್ಸಾರಿ ಹಾಲಿ ಬಂಡಾ ಜೈಲಿನಲ್ಲಿದ್ದರೆ, ಸುಹೇಲ್ ದೇವ್ ಭಾರತೀಯ ಸಮಾಜ ಪಾರ್ಟಿಯ ಶಾಸಕನಾಗಿರುವ ಪುತ್ರ ಅಬ್ಬಾಸ್ ಅನ್ಸಾರಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕಾಸಗಂಜ್ ಜಿಲ್ಲಾ ಕಾರಾಗೃಹದಲ್ಲಿದ್ದಾರೆ.