ಇಸ್ರೇಲ್ ವಾಯುದಾಳಿಯಿಂದ ಸಿರಿಯಾದ ವಿಮಾನ ನಿಲ್ದಾಣಕ್ಕೆ ಹಾನಿ
ದಮಾಸ್ಕಸ್, ಮಾ.7: ಇಸ್ರೇಲ್‍ನ ಯುದ್ಧವಿಮಾನಗಳು ಮಂಗಳವಾರ ಬೆಳಿಗ್ಗೆ ನಡೆಸಿದ ವಾಯುದಾಳಿಯಲ್ಲಿ ಸಿರಿಯಾದ ಅಲೆಪ್ಪೋ ವಿಮಾನ ನಿಲ್ದಾಣಕ್ಕೆ ತೀವ್ರ ಹಾನಿಯಾಗಿದೆ ಎಂದು ಸಿರಿಯಾದ ರಕ್ಷಣಾ ಇಲಾಖೆ ಹೇಳಿದೆ.
ಸ್ಥಳೀಯ ಕಾಲಮಾನ ಬೆಳಿಗ್ಗೆ 2 ಗಂಟೆಯ ವೇಳೆಗೆ ಇಸ್ರೇಲಿ ವೈರಿಗಳು ಮೆಡಿಟರೇನಿಯನ್ ಪಶ್ಚಿಮದಿಂದ ಅಲೆಪ್ಪೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ವಾಯುದಾಳಿ ನಡೆಸಿದ್ದಾರೆ. ವಾಯುದಾಳಿಯಿಂದ ವಿಮಾನನಿಲ್ದಾಣಕ್ಕೆ ಹಾನಿಯಾಗಿದ್ದು ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಸಾವು-ನೋವಿನ ಬಗ್ಗೆ ತಕ್ಷಣಕ್ಕೆ ಮಾಹಿತಿಯಿಲ್ಲ ಎಂದು ಸಿರಿಯಾದ ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಫೆಬ್ರವರಿ 6ರಂದು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸಂತ್ರಸ್ತರಾದವರಿಗೆ ಅಂತರಾಷ್ಟ್ರೀಯ ಸಮುದಾಯದ ನೆರವನ್ನು ಹೊತ್ತುತರುವ ವಿಮಾನಗಳು ಅಲೆಪ್ಪೋ ನಿಲ್ದಾಣವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಇಲ್ಲಿಂದ ಸಂತ್ರಸ್ತ ಪ್ರದೇಶಗಳಿಗೆ ಪರಿಹಾರ ಸಾಮಾಗ್ರಿ ವಿತರಣೆ ಸುಲಭವಾಗಿದೆ. ಆದರೆ ಇದೀಗ ಇಸ್ರೇಲ್ ವಾಯುದಾಳಿಯ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣವನ್ನು ಮುಚ್ಚಿರುವುದು ಪರಿಹಾರ ಸಾಮಾಗ್ರಿ ಪೂರೈಕೆಗೆ ತೊಡಕುಂಟು ಮಾಡಿದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.