ಮಹಿಳೆಯರ ಹಕ್ಕುಗಳ ದಮನ ಕೃತ್ಯ ಅಫ್ಘಾನ್‍ನಲ್ಲಿ ಗರಿಷ್ಟ: ಮಹಿಳಾ ದಿನದಂದು ವಿಶ್ವಸಂಸ್ಥೆ ವರದಿ

Update: 2023-03-08 15:55 GMT

ವಿಶ್ವಸಂಸ್ಥೆ, ಮಾ.8: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಮಹಿಳೆಯರು ಮತ್ತು ಬಾಲಕಿಯರು ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದು ಅಫ್ಘಾನಿಸ್ತಾನವು ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ವಿಶ್ವದ ಅತ್ಯಂತ ದಮನಕಾರಿ ದೇಶವಾಗಿದೆ ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದೆ.

ಅಫ್ಘಾನಿಸ್ತಾನದ ಹೊಸ ಆಡಳಿತಗಾರರು ಮಹಿಳೆಯರು ಮತ್ತು ಬಾಲಕಿಯರನ್ನು ಅವರ ಮನೆಯೊಳಗೇ ನಿರ್ಬಂಧಿಸುವ ಮೂಲಕ ಮಹಿಳೆಯರ ಹಕ್ಕುಗಳನ್ನು ದಮನಿಸುವ ಏಕೈಕ ಉದ್ದೇಶ ಸಾಧನೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಅಂತರಾಷ್ಟ್ರೀಯ ಮಹಿಳಾ ದಿನದಂದು  ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ವಿಶ್ವಸಂಸ್ಥೆಯ ನಿಯೋಗ ಹೇಳಿದೆ.

2021ರ ಆಗಸ್ಟ್‍ನಲ್ಲಿ ಮತ್ತೆ ಅಧಿಕಾರ ಕೈವಶಮಾಡಿಕೊಳ್ಳುವುದಕ್ಕೂ ಮುನ್ನ ನೀಡಿದ್ದ ವಾಗ್ದಾನಗಳಿಗೆ ವ್ಯತಿರಿಕ್ತವಾಗಿ ಅಫ್ಘಾನ್‍ನಲ್ಲಿ ಕೆಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ.

6ನೇ ತರಗತಿಯ ಬಳಿಕ ಹುಡುಗಿಯರು ಶಿಕ್ಷಣ ಮುಂದುವರಿಸುವುದನ್ನು, ಮಹಿಳೆಯರು ಪಾರ್ಕ್ ಮತ್ತು ಜಿಮ್‍ನಂತಹ ಸಾರ್ವಜನಿಕ ಪ್ರದೇಶಕ್ಕೆ ತೆರಳುವುದನ್ನು , ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿದೆ. ಮಹಿಳೆಯರು ತಲೆಯಿಂದ ಪಾದದವರೆಗೆ ಸಂಪೂರ್ಣ ದೇಹವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು ಎಂದು ಆದೇಶ ಜಾರಿಗೊಳಿಸಿದೆ. ತಾಲಿಬಾನ್ ಆಡಳಿತದಡಿ ಅಫ್ಘಾನಿಸ್ತಾನವು ವಿಶ್ವದ ಅತ್ಯಂತ ದಮನಕಾರಿ ದೇಶವಾಗಿದೆ. ಮಹಿಳೆಯರು ಮತ್ತು ಮಕ್ಕಳನ್ನು ಸಾರ್ವಜನಿಕ ಬದುಕಿನಿಂದ ದೂರತಳ್ಳಲು ನಡೆಸಿರುವ ಕ್ರಮಬದ್ಧ, ವ್ಯವಸ್ಥಿತ, ಉದ್ದೇಶಪೂರ್ವಕ ಪ್ರಯತ್ನಗಳಿಗೆ ಜಗತ್ತು ಸಾಕ್ಷಿಯಾಗಿದೆ ಎಂದು ಅಫ್ಘಾನಿಸ್ತಾನಕ್ಕೆ ವಿಶ್ವಸಂಸ್ಥೆ ನಿಯೋಗದ ಮುಖ್ಯಸ್ಥೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವಿಶೇಷ ಪ್ರತಿನಿಧಿ ರೋಝಾ ಒಟುನ್‍ಬಯೆವ ಹೇಳಿದ್ದಾರೆ.

ಈ ನಿರ್ಬಂಧಗಳು, ವಿಶೇಷವಾಗಿ ಶಿಕ್ಷಣ ಮತ್ತು ಎನ್‍ಜಿಒ ಸಂಸ್ಥೆಗಳಲ್ಲಿ ಕೆಲಸ ಮಾಡುವುದಕ್ಕೆ ನಿಷೇಧವು ಅಂತರಾಷ್ಟ್ರೀಯ ಸಮುದಾಯದ ತೀವ್ರ ಟೀಕೆಗೆ ಗುರಿಯಾಗಿದೆ. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ತಾಲಿಬಾನ್, ಶಾಲೆಗಳಲ್ಲಿ ಲಿಂಗಪ್ರತ್ಯೇಕತೆಯ ನಿಯಮಗಳನ್ನು ಅನುಸರಿಸದ ಕಾರಣ ಮತ್ತು ವಸ್ತ್ರಸಂಹಿತೆಯನ್ನು ಮಹಿಳೆಯರು ಪಾಲಿಸದ ಕಾರಣ ಈ ತಾತ್ಕಾಲಿಕ ಕ್ರಮಗಳ ಅಗತ್ಯವಿದೆ. ವಿಶ್ವವಿದ್ಯಾನಿಲಯದ ಪಠ್ಯಗಳಲ್ಲಿರುವ ವಿಷಯಗಳು ಅಫ್ಘಾನ್ ಮತ್ತು ಇಸ್ಲಾಮಿಕ್ ಸಿದ್ಧಾಂತಗಳಿಗೆ ಸರಿಹೊಂದುವುದಿಲ್ಲ ಎಂದು ಪ್ರತಿಪಾದಿಸಿದೆ.

ವಿಶ್ವದ ಅತೀದೊಡ್ಡ ಮಾನವೀಯ ಮತ್ತು ಆರ್ಥಿಕ ಬಿಕ್ಕಟ್ಟು ಇರುವ ದೇಶದಲ್ಲಿ ಜನಸಂಖ್ಯೆಯ 50%ದಷ್ಟು ಜನರನ್ನು ಅವರ ಮನೆಯೊಳಗೆ ಸೀಮಿತಗೊಳಿಸುವುದು ರಾಷ್ಟ್ರೀಯ ಸ್ವಯಂಹಾನಿಯ ಕೃತ್ಯವಾಗಿದೆ. ಇದು ಮಹಿಳೆಯರು ಮತ್ತು ಬಾಲಕಿಯರನ್ನು ಮಾತ್ರವಲ್ಲ, ಮುಂದಿನ ಹಲವು ತಲೆಮಾರುಗಳ ಜನರನ್ನು ಬಡತನ ಮತ್ತು ನೆರವು ಅವಲಂಬನೆಗೆ ಬಲವಂತಗೊಳಿಸುತ್ತದೆ. ಅಫ್ಘಾನೀಯರನ್ನು ದೇಶದ ಪ್ರಜೆಗಳಿಂದ ಮತ್ತು ಜಾಗತಿಕ ಸಮುದಾಯದಿಂದ ಪ್ರತ್ಯೇಕಿಸುತ್ತದೆ ಎಂದು ರೋಝಾ ಒಟುನ್‍ಬಯೆವ ಹೇಳಿದ್ದಾರೆ.

ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ನಿಯಂತ್ರಣ ಸಾಧಿಸಿದ ಬಳಿಕ ಮಹಿಳೆಯರ ವಿರುದ್ಧದ ತಾರತಮ್ಯದ ಶಾಸನಗಳು ಹಾಗೂ ನಿರಂತರ ಕ್ರಮಗಳನ್ನು ದಾಖಲಿಸಿಕೊಳ್ಳಲಾಗಿದೆ. ಮನೆಬಿಟ್ಟು ಹೊರತೆರಳದಂತೆ, ಸಾರ್ವಜನಿಕ ಪ್ರದೇಶಗಳಿಗೆ ಭೇಟಿ ನೀಡದಂತೆ ಮಹಿಳೆಯರನ್ನು ನಿರ್ಬಂಧಿಸುವ ಜತೆಗೆ, ಸಾರ್ವಜನಿಕ  ನಿರ್ಧಾರ ಕೈಗೊಳ್ಳುವಿಕೆಯ ಎಲ್ಲಾ ಹಂತಗಳಿಂದ ಮಹಿಳೆಯರನ್ನು ದೂರ ಇಡಲಾಗಿದೆ ಎಂದು ಅಫ್ಘಾನಿಸ್ತಾನದಲ್ಲಿನ ವಿಶ್ವಸಂಸ್ಥೆಯ ನಿಯೋಗ ವರದಿ ಮಾಡಿದೆ.

ಅಫ್ಘಾನಿಸ್ತಾನದ 11.6 ದಶಲಕ್ಷ ಮಹಿಳೆಯರು ಮತ್ತು ಬಾಲಕಿಯರು ಮಾನವೀಯ ನೆರವಿನ ನಿರೀಕ್ಷೆಯಲ್ಲಿದ್ದಾರೆ ಎಂದು  ವಿಶ್ವಸಂಸ್ಥೆ ವರದಿ ಮಾಡಿದೆ.

Similar News