ಮಹಿಳೆಯರ ಪ್ರೀಮಿಯರ್ ಲೀಗ್: ಯುಪಿ ವಾರಿಯರ್ಸ್‌ಗೆ ಭರ್ಜರಿ ಜಯ, ಆರ್‌ಸಿಬಿಗೆ ಸತತ 4ನೇ ಸೋಲು
Update: 2023-03-10 22:31 IST
ಮುಂಬೈ, ಮಾ.10: ಆರಂಭಿಕ ಆಟಗಾರ್ತಿ, ನಾಯಕಿ ಅಲಿಸ್ಸಾ ಹೀಲಿ ಸಿಡಿಸಿದ ಚೊಚ್ಚಲ ಅರ್ಧಶತಕದ(96 ರನ್, 47 ಎಸೆತ, 18 ಬೌಂಡರಿ, 1 ಸಿಕ್ಸರ್)ನೆರವಿನಿಂದ ಯುಪಿ ವಾರಿಯರ್ಸ್ ತಂಡ ಮಹಿಳೆಯರ ಪ್ರೀಮಿಯರ್ ಲೀಗ್(ಡಬ್ಲಪಿಎಲ್)ನಲ್ಲಿ ಶುಕ್ರವಾರ ನಡೆದ 8ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಗೆಲ್ಲಲು 139 ರನ್ ಗುರಿ ಪಡೆದ ಯುಪಿ ವಿಕೆಟ್ ನಷ್ಟವಿಲ್ಲದೆ 13 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಹೀಲಿ ಹಾಗೂ ದೇವಿಕಾ ವೈದ್ಯ(ಔಟಾಗದೆ 36)ಮೊದಲ ವಿಕೆಟಿಗೆ 139 ರನ್ ಸೇರಿಸಿ ಸುಲಭ ಗೆಲುವು ತಂದುಕೊಟ್ಟರು. ಮತ್ತೊಂದೆಡೆ ಟೂರ್ನಿಯಲ್ಲಿ ಆರ್‌ಸಿಬಿ ಸತತ 4ನೇ ಸೋಲನುಭವಿಸಿ ಕಂಗಲಾಗಿದೆ.
ಇದಕ್ಕೂ ಮೊದಲು ಟಾಸ್ ಜಯಿಸಿದ್ದ ಆರ್‌ಸಿಬಿ ಅಗ್ರ ಸರದಿಯ ಆಟಗಾರ್ತಿ ಎಲ್ಲಿಸ್ ಪೆರ್ರಿ ಅರ್ಧಶತಕದ(52 ರನ್, 39 ಎಸೆತ)ಬಲದಿಂದ ಯುಪಿ ವಾರಿಯರ್ಸ್ ಗೆಲುವಿಗೆ 139 ರನ್ ಗುರಿ ನೀಡಿತು.