ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಂಧನಕ್ಕೆ ಬಂದ ಪೊಲೀಸರನ್ನು ತಡೆದು ನಿಲ್ಲಿಸಿದ ಬೆಂಬಲಿಗರು

Update: 2023-03-14 18:16 GMT

ಲಾಹೋರ್, ಮಾ.14: ತೋಷಖಾನಾ ಪ್ರಕರಣದಲ್ಲಿ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ, ಪಿಟಿಐ ಪಕ್ಷದ ಮುಖಂಡ ಇಮ್ರಾನ್‌ಖಾನ್‌ರನ್ನು ಬಂಧಿಸಲು ಪೊಲೀಸರು ಮಂಗಳವಾರ ಅವರ ನಿವಾಸಕ್ಕೆ ತೆರಳಿದಾಗ, ನಿವಾಸದ ಎದುರು ಸೇರಿದ್ದ ಇಮ್ರಾನ್ ಬೆಂಬಲಿಗರು ತಡೆಯೊಡ್ಡಿದಾಗ ಪೊಲೀಸರು ಮತ್ತು  ಇಮ್ರಾನ್ ಬೆಂಬಲಿಗರ ಮಧ್ಯೆ ಘರ್ಷಣೆ ನಡೆದಿರುವುದಾಗಿ ವರದಿಯಾಗಿದೆ.

ಇಮ್ರಾನ್ ಬೆಂಬಲಿಗರನ್ನು ಚದುರಿಸಲು ಪೊಲೀಸರು ಲಾಠಿಜಾರ್ಜ್ ನಡೆಸಿದ ಬಳಿಕ  ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದರು. ಆಗ ಖಾನ್ ಬೆಂಬಲಿಗರು ಪೊಲೀಸರತ್ತ ಇಟ್ಟಿಗೆ ಮತ್ತು ಕಲ್ಲೆಸೆದರು. ಈ ಘರ್ಷಣೆಯಲ್ಲಿ ಇಮ್ರಾನ್‌ಖಾನ್ ಅವರ 35 ಬೆಂಬಲಿಗರು ಹಾಗೂ 12ರಷ್ಟು ಪೊಲೀಸರು ಗಾಯಗೊಂಡರು ಎಂದು ಎಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಈ ಮಧ್ಯೆ, ಪೊಲೀಸರು ಬಂಧನಕ್ಕೆ ಆಗಮಿಸುವ ಮಾಹಿತಿ ತಿಳಿಯುತ್ತಿದ್ದಂತೆಯೇ, ತನ್ನ ಬೆಂಬಲಿಗರನ್ನುದ್ದೇಶಿಸಿ ವೀಡಿಯೊ ಸಂದೇಶ ರವಾನಿಸಿದ ಇಮ್ರಾನ್ ‘ ನನ್ನನ್ನು ಕೊಂದ ಬಳಿಕ ದೇಶ ಸುಮ್ಮನೆ ಮಲಗುತ್ತದೆ ಎಂದು ಅವರು ಭಾವಿಸಿದ್ದಾರೆ. ಅದು ತಪ್ಪು ಎಂಬುದನ್ನು ನೀವು ಸಾಬೀತುಪಡಿಸಬೇಕು. ನನಗೇನಾದರೂ ಆದರೆ, ನಾನು ಜೈಲುಪಾಲಾದರೆ ಅಥವಾ ನನ್ನ ಹತ್ಯೆಯಾದರೆ, ಇಮ್ರಾನ್ ಇಲ್ಲದೆಯೂ ಹೋರಾಡುತ್ತೇವೆ ಎಂಬುದನ್ನು ನೀವು ಸಾಬೀತುಪಡಿಸಬೇಕು. ಈ ಜನರ ಗುಲಾಮರಾಗಿರಲು ಮತ್ತು ಒಬ್ಬ ಮನುಷ್ಯ ದೇಶದ ಪರ ನಿರ್ಧಾರ ಕೈಗೊಳ್ಳುವುದನ್ನು ಒಪ್ಪುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಕರೆ ನೀಡಿದ್ದರು. ಇಮ್ರಾನ್ ಮನೆಯನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿದ್ದ ಪೊಲೀಸರು, ಮನೆಯ ಎದುರು ಕಂಟೈನರ್ ಹಾಗೂ ಬ್ಯಾರಿಕೇಡ್‌ಗಳನ್ನು ಇರಿಸಿದ್ದರು ಎಂದು ವರದಿಯಾಗಿದೆ.

ಎಲ್ಲರೂ ಶಾಂತಿಯಿಂದ ಇದ್ದು ತಾಳ್ಮೆ ವಹಿಸುವಂತೆ ಕರೆ ನೀಡಿದ ಮುಖಂಡನ ಮನೆಯ ಮೇಲೆ ಅವರು ಗುಂಡಿನ ದಾಳಿ ನಡೆಸಿದ್ದಾರೆ. ಇದು ದೇಶದಲ್ಲಿ ಪ್ರಜಾಪ್ರಭುತ್ವ ರದ್ದುಗೊಂಡಿರುವ ಸೂಚನೆಯಾಗಿದೆ ಎಂದು ಪಿಟಿಐ ಮುಖಂಡ ಶಿರೀನ್ ಮಝಾರಿ ವೀಡಿಯೊ ಸಹಿತ ಟ್ವೀಟ್ ಮಾಡಿದ್ದಾರೆ. 2018ರಿಂದ 2022ರವರೆಗೆ ಅಧಿಕಾರದಲ್ಲಿದ್ದಾಗ ಪಡೆದಿದ್ದ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣದಲ್ಲಿ ಇಮ್ರಾನ್ ಬಂಧನಕ್ಕೆ ಇಸ್ಲಮಾಬಾದ್‌ನ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 

Similar News