ಇಮ್ರಾನ್ ಖಾನ್ ಬಂಧಿಸುವ ಯತ್ನ ಕೈ ಬಿಡಿ: ಪಾಕಿಸ್ತಾನ ಪೊಲೀಸರಿಗೆ ಲಾಹೋರ್ ನ್ಯಾಯಾಲಯ ಆದೇಶ

Update: 2023-03-15 17:18 GMT

ಲಾಹೋರ್, ಮಾ.15: ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಅಧ್ಯಕ್ಷ ಇಮ್ರಾನ್‍ಖಾನ್ ಅವರನ್ನು ಬಂಧಿಸಲು ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯನ್ನು ಗುರುವಾರ(ಮಾರ್ಚ್ 16) ಬೆಳಿಗ್ಗೆ 10 ಗಂಟೆಯವರೆಗೆ ಸ್ಥಗಿತಗೊಳಿಸುವಂತೆ ಲಾಹೋರ್ ಹೈಕೋರ್ಟ್ ಆದೇಶಿಸಿರುವುದಾಗಿ `ಡಾನ್' ವರದಿ ಮಾಡಿದೆ.

ಇದರೊಂದಿಗೆ ಇಮ್ರಾನ್‍ಖಾನ್ ಮತ್ತೊಮ್ಮೆ ಬಂಧನದಿಂದ ಬಚಾವಾಗಿದ್ದಾರೆ. `ಲಾಹೋರ್‍ನಲ್ಲಿ ನಡೆಯುವ ಪಾಕಿಸ್ತಾನ್ ಸೂಪರ್‍ಲೀಗ್ ಕ್ರಿಕೆಟ್ ಪಂದ್ಯಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಬುಧವಾರ ಸಂಜೆಯ ಬಳಿಕ ಕಾರ್ಯಾಚರಣೆ ನಿಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ' ಎಂದು ವರದಿ ತಿಳಿಸಿದೆ. ತೋಷಖಾನಾ ಪ್ರಕರಣದಲ್ಲಿ ಇಮ್ರಾನ್‍ಖಾನ್ ಅವರನ್ನು ಬಂಧಿಸಲು ಮಂಗಳವಾರ ಸಂಜೆ ಪೊಲೀಸರು ಲಾಹೋರ್‍ನಲ್ಲಿರುವ ಇಮ್ರಾನ್ ಮನೆಗೆ ಆಗಮಿಸಿದಾಗ ಪಿಟಿಐ ಕಾರ್ಯಕರ್ತರಿಂದ ಭಾರೀ ಪ್ರತಿಭಟನೆ, ವಿರೋಧ ವ್ಯಕ್ತವಾಗಿತ್ತು. ಪಿಟಿಐ ಕಾರ್ಯಕರ್ತರು ಪೊಲೀಸರತ್ತ ಕಲ್ಲು, ಇಟ್ಟಿಗೆಗಳನ್ನು ಎಸೆದರೆ, ಪೊಲೀಸರು ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ, ಜಲಫಿರಂಗಿ ಪ್ರಯೋಗಿಸಿ ಕಾರ್ಯಕರ್ತರನ್ನು ಚದುರಿಸುವ ಪ್ರಯತ್ನ ನಡೆಸಿದ್ದರು. ಬಳಿಕ ಇಸ್ಲಮಾಬಾದ್ ಸೇರಿದಂತೆ ಹಲವೆಡೆ ತೀವ್ರ ಪ್ರತಿಭಟನೆ ಆರಂಭವಾಗಿತ್ತು.

ಇಮ್ರಾನ್ ಮನೆಯೆದುರು ನಡೆಯುತ್ತಿರುವ `ದೌರ್ಜನ್ಯ'ವನ್ನು ನಿಲ್ಲಿಸಲು ಸೂಚಿಸಬೇಕೆಂದು ಕೋರಿ ಪಿಟಿಐ ಪಕ್ಷದ ಮುಖಂಡ ಫವಾದ್ ಚೌಧರಿ ಲಾಹೋರ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅಪರಾಹ್ನ 3 ಗಂಟೆಗೆ ನ್ಯಾಯಾಲಯದಲ್ಲಿ ಹಾಜರಿರುವಂತೆ ಪಂಜಾಬ್ ಪೊಲೀಸ್ ಅಧೀಕ್ಷಕರು ಹಾಗೂ ಇಸ್ಲಮಾಬಾದ್ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತ್ತು. ಅದರಂತೆ ನ್ಯಾಯಾಲಯದಲ್ಲಿ ಹಾಜರಾದ ಅಧಿಕಾರಿಗಳಿಗೆ ಬಂಧನ ಕಾರ್ಯಾಚರಣೆಯನ್ನು ಗುರುವಾರ ಬೆಳಿಗ್ಗೆ 10 ಗಂಟೆಯವರೆಗೆ ಸ್ಥಗಿತಗೊಳಿಸುವಂತೆ ಸೂಚಿಸಿದೆ ಎಂದು ವರದಿಯಾಗಿದೆ.

ಬುಧವಾರ, ನ್ಯಾಯಾಲಯದ ಸೂಚನೆ ಮೇರೆಗೆ ಕಾನೂನು ಅನುಷ್ಟಾನ ಅಧಿಕಾರಿಗಳು ಇಮ್ರಾನ್ ಬಂಧನ ಪ್ರಕ್ರಿಯೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಇಮ್ರಾನ್ ಅವರ ಝಮಾನ್ ಪಾರ್ಕ್ ನಿವಾಸದ ಎದುರು ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಪೊಲೀಸರು ಹಿಂದಕ್ಕೆ ಸರಿದ ಬಳಿಕ ಮಾಸ್ಕ್ ಧರಿಸಿ ಮನೆಯಿಂದ ಹೊರಬಂದ ಇಮ್ರಾನ್‍ಖಾನ್ ಕಾರ್ಯಕರ್ತರನ್ನು ಭೇಟಿಯಾದರು. ಇದಕ್ಕೂ ಮುನ್ನ, ಪಂಜಾಬ್ ಪೊಲೀಸ್ ಮತ್ತು ಇಸ್ಲಮಾಬಾದ್ ಪೊಲೀಸರ ತಂಡವು ಇಮ್ರಾನ್ ಬಂಧನ ಪ್ರಯತ್ನ ಮುಂದುವರಿಸಿದಾಗ ಪಿಟಿಐ ಕಾರ್ಯಕರ್ತರಿಂದ ಭಾರೀ ಪ್ರತಿರೋಧ ಎದುರಾಗಿತ್ತು.  

Similar News