ಮೆಕ್ಸಿಕೊ: 8 ಮಂದಿಯನ್ನು ಹತ್ಯೆಗೈದ 14 ವರ್ಷದ ಬಾಲಕನ ಬಂಧನ

Update: 2023-03-18 17:25 GMT

ಮೆಕ್ಸಿಕೊ ನಗರ,ಮಾ.17: ಮೆಕ್ಸಿಕೊ ನಗರದ ಸಮೀಪ ಮಾದಕದ್ರವ್ಯಕ್ಕೆ ಸಂಬಂಧಿಸಿದ ವಿವಾದದಲ್ಲಿ ಕನಿಷ್ಠ ಎಂಟು ಮಂದಿಯನ್ನು ಹತ್ಯೆಗೈದ 14 ವರ್ಷ ವಯಸ್ಸಿನ ಬಾಲಕನನ್ನು ಬಂಧಿಸಿರುವುದಾಗಿ ಮೆಕ್ಸಿಕೊದ ಫೆಡರಲ್ ಸಾರ್ವಜನಿಕ ಸುರಕ್ಷತಾ ಇಲಾಖೆ ಗುರುವಾರ ತಿಳಿಸಿದೆ.

ಮೆಕ್ಸಿಕೊ ಸಿಟಿಯ ಬಡಜನರೇ ಅಧಿಕ ಸಂಖ್ಯೆಯಲ್ಲಿರುವ ಉಪನಗರವಾದ ಚಿಮಾಲುಹಾಕಾನ್ ನಲ್ಲಿ ಜನವರಿ 22ರಂದು ಈ ಹತ್ಯಾಕಾಂಡ ನಡೆದಿತ್ತು. ಬೈಕ್ನಲ್ಲಿ ಆಗಮಿಸಿದ ಅಪ್ರಾಪ್ತ ಬಾಲಕನು ಕುಟುಂಬವೊಂದರ ಮೇಲೆ ಬಂದೂಕಿನಿಂದ ದಾಳಿ ಮಾಡಿದ್ದಾನೆ. ಈ ಹತ್ಯಾಕಾಂಡಕ್ಕೆ ಸಂಬಂಧಿಸಿ ಇನ್ನೋರ್ವ ವ್ಯಕ್ತಿಯನ್ನು ಕೂಡಾ ಬಂಧಿಸಲಾಗಿದೆ ಹಾಗೂ ಮಾದಕದ್ರವ್ಯ ಸಾಗಣೆಯ ಆರೋಪದಲ್ಲಿ ಗ್ಯಾಂಗೊಂದರ ಇತರ ಏಳು ಮಂದಿ ಸದಸ್ಯರನ್ನು ಕೂಡಾ ಬಂಧಿಸಲಾಗಿದೆಯೆಂದು ಅವರು ಹೇಳಿದ್ದಾರೆ.

ಮನೆಯೊಂದರಲ್ಲಿ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಪಾಲ್ಗೊಂಡಿದ್ದವರ ಮೇಲೆ ಈ ಬಾಲಕ ಗುಂಡಿನ ದಾಳಿ ನಡೆಸಿದ್ದನೆನ್ನಲಾಗಿದೆ. ಘಟನೆಯಲ್ಲಿ ಇತರ ಐವರು ವಯಸ್ಕರು ಮತ್ತು ಇಬ್ಬರು ಮಕ್ಕಳು ಗಾಯಗೊಂಡಿದ್ದರು.

Similar News