ಈಕ್ವೆಡಾರ್‌ನಲ್ಲಿ ಪ್ರಬಲ ಭೂಕಂಪ: ಕನಿಷ್ಠ ನಾಲ್ವರು ಮೃತ್ಯು

Update: 2023-03-19 03:11 GMT

ಈಕ್ವೆಡಾರ್: ಈಕ್ವೆಡಾರ್ ಕರಾವಳಿಯಲ್ಲಿ ಶನಿವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಪ್ರಕಟಿಸಿದೆ.

ಭೂಕಂಪ ಸುಮಾರು 66 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.8ರಷ್ಟಿತ್ತು ಎಂದು ಅಮೆರಿಕದ ಜಿಯಲಾಜಿಯಲ್ ಸರ್ವೆ ಹೇಳಿದೆ. ಆದರೆ ಈಕ್ವೆಡಾರ್ ಸರ್ಕಾರ ಭೂಕಂಪದ ತೀವ್ರತೆಯನ್ನು 6.5 ಎಂದು ಹೇಳಿಕೊಂಡಿದೆ. ಗುವಾಯಸ್ ಪ್ರದೇಶದಲ್ಲಿ ಹಲವು ಕಟ್ಟಡಗಳಿಗೆ ಭೂಕಂಪದಿಂದಾಗಿ ಹಾನಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕ್ಯೂಯೆಂಕಾ ನಗರದಲ್ಲಿ ಕಾರಿನ ಮೇಲೆ ಕಟ್ಟಡವೊಂದು ಕುಸಿದು ಬಿದ್ದು ಒಬ್ಬ ಮೃತಪಟ್ಟಿದ್ದಾನೆ. ಸಾಂಟಾ ರೋಸಾ ಪ್ರದೇಶದಲ್ಲಿ ಇತರ ಮೂವರು ಮೃತಪಟ್ಟಿದ್ದಾರೆ. ಇತರ ಹಲವರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಸರ್ಕಾರ ವಿವರಿಸಿದೆ.

ರಾಜಧಾನಿ ಕ್ಯೂಟೊಗೆ ತೈಲ ಸರಬರಾಜು ಮಾಡುವ ಎಸ್ಮೆರಲ್ಡಾಸ್ ಪೈಪ್‌ಲೈನ್ ಅನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದ್ದು, ಇದೀಗ ಮತ್ತೆ ಕಾರ್ಯಾಚರಣೆ ಆರಂಭಿಸಿದೆ. ಕೋಸ್ಟಲ್ ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ಪ್ಲಾಂಟ್ ಮತ್ತು ಇತರ ಎರಡು ಟರ್ಮಿನಲ್‌ಗಳಿಂದ ಉದ್ಯೋಗಿಗಳನ್ನು ಸ್ಥಳಾಂತರಿಸಲಾಗಿದೆ. ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಮಚಾಲಾ ಪಟ್ಟಣದಲ್ಲಿ ಹಲವು ಕಟ್ಟಡಗಳು ಧ್ವಂಸವಾಗಿರುವುದು ಸಾಮಾಜಿಕ ಜಾಲತಾಣ ಪೋಸ್ಟಿಂಗ್‌ನಿಂದ ತಿಳಿದು ಬರುತ್ತಿದೆ. ಕ್ಯೂಯೆನ್ಸಾ ನಗರದಲ್ಲಿ ಕೂಡಾ ಕಟ್ಟಡಗಳಿಗೆ ಹಾನಿಯಾಗಿದೆ.

Similar News