​ಪಾಕ್ ಜೊತೆ ಉದ್ಯಮ ಬಾಂಧವ್ಯಗಳನ್ನು ಬಲಪಡಿಸಲು ಭಾರತ ಬಯಸುತ್ತಿದೆ: ಭಾರತದ ಉಪಹೈಕಮೀಶನರ್ ಸುರೇಶ್ ಕುಮಾರ್

Update: 2023-03-19 04:45 GMT

ಇಸ್ಲಾಮಾಬಾದ್,ಮಾ.18: ಭಾರತವು ಪಾಕಿಸ್ತಾನದ ಜೊತೆಗೆ ಯಾವುದೇ ರೀತಿಯ ವಾಣಿಜ್ಯ ಸಂಬಂಧಗಳನ್ನು ಸ್ಥಗಿತಗೊಳಿಸಿಲ್ಲ ಹಾಗೂ ಆ ದೇಶದ ಜೊತೆ ಔದ್ಯಮಿಕ ಬಾಂಧವ್ಯಗಳನ್ನು ಸಹಜಗೊಳಿಸುವತ್ತ ಹೆಜ್ಜೆಯಿಡಲು ಬಯಸುತ್ತಿದೆ ಎಂದು ಪಾಕಿಸ್ತಾನದಲ್ಲಿನ ಭಾರತದ ಉಪ ಹೈಕಮೀಶನರ್ ಸುರೇಶ್ ಕುಮಾರ್ ತಿಳಿಸಿದ್ದಾರೆ. ‘‘ಇಂದಿನ ಜಗತ್ತಿನಲ್ಲಿ ರಾಜತಾಂತ್ರಿಕತೆಯು ಪ್ರವಾಸೋದ್ಯಮ, ವ್ಯಾಪಾರ ಹಾಗೂ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುತ್ತದೆ. ಯಾಕೆಂದರೆ ಹಣವು ಅದರದ್ದೇ ಆದ ಭಾಷೆಯಲ್ಲಿ ಮಾತನಾಡುತ್ತದೆ ’’ಎಂದವರು ಹೇಳಿದ್ದಾರೆ.

ಲಾಹೋರ್ ವಾಣಿಜ್ಯಹಾಗೂ ಕೈಗಾರಿಕಾ ಮಂಡಳಿಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆಂದು ‘ದಿ ಡಾನ್ ’ ಪತ್ರಿಕೆ ವರದಿ ಮಾಡಿದೆ.

‘‘ಭಾರತವು ಯಾವತ್ತಿಗೂ ಪಾಕಿಸ್ತಾನದ ಜೊತೆ ಉತ್ತಮ ಸಂಬಂಧಗಳನ್ನು ಹೊಂದಲು ಬಯಸುತ್ತಿದೆ. ಯಾಕೆಂದರೆ ನಮ್ಮ ಭೌಗೋಳಿಕತೆಯನ್ನು ಬದಲಾಯಿಸಲು ಎಂದಿಗೂ ಸಾಧ್ಯವಿಲ್ಲ’’ ಎಂದರು. ‘‘ನಾವು ಪಾಕಿಸ್ತಾನದ ಜೊತೆಗಿನ ವ್ಯಾಪಾರವನ್ನು ಸ್ಥಗಿತಗೊಳಿಸಿಲ್ಲ. ಆದರೆ ಪಾಕಿಸ್ತಾನವು ಹಾಗೆ ಮಾಡಿತ್ತು.ಉಭಯ ದೇಶಗಳು ನಮ್ಮ ನಡುವಿನ ಸಮಸ್ಯೆಗಳನ್ನು ಹಾಗೂ ಸನ್ನಿವೇಶಗಳನ್ನು ನಾವು ಹೇಗೆ ಬದಲಾಯಿಸಲು ಸಾಧ್ಯವೆಂಬುದನ್ನು ಪರಿಶೀಲಿಸುವುದು ಒಳಿತು’’ ಎಂದು ಕುಮಾರ್ ಅಭಿಪ್ರಾಯಿಸಿದರು.

ಕೋವಿಡ್19 ಸಾಂಕ್ರಾಮಿಕದ ಅವಧಿಯಲ್ಲಿ ಪಾಕಿಸ್ತಾನಿಗಳಿಗೆ ಭಾರತೀಯ ರಾಯಭಾರಿ ಕಚೇರಿಯಿಂದ ನೀಡಲಾದ ವೀಸಾಗಳ ಸಂಖ್ಯೆಯಲ್ಲಿ ಇಳಿಕೆಯಾಗಿರುವುದನ್ನು ಅವರು ಒಪ್ಪಿಕೊಂಡರು. ಆದಾಗ್ಯೂ, ವೀಸಾ ಸಂಖ್ಯೆಯಲ್ಲಿ ಈಗ ಹೆಚ್ಚಳವಾಗಿದೆ.ಪ್ರತಿ ವರ್ಷವೂ ಪಾಕಿಸ್ತಾನದ 30 ಸಾವಿರ ಮಂದಿ ವೀಸಾಗಳನ್ನು ನೀಡಲಾಗುತ್ತಿದೆ ಎಂದವರು ಹೇಳಿದರು.

 ಭಾರತ ಸರಕಾರವು ಪಾಕ್ ಪ್ರಜೆಗಳಿಗೆ ಕ್ರೀಡಾ ಹಾಗೂ ವೈದ್ಯಕೀಯ ವೀಸಾಗಳನ್ನು ಕೂಡಾ ನೀಡುತ್ತಿದೆ ಎಂದರು. ಸರಕು ಹಾಗೂ ಸೇವೆಗಳ ಆಮದು ಉತ್ತಮವಲ್ಲವೆಂಬುದನ್ನು ಯಾವಾಗಲೂ ಹೇಳಲಾಗದು.ಹಲವು ಸಂದರ್ಭಗಳಲ್ಲಿ ಅದರಿಂದ ಪ್ರಯೋಜನಗಳೂ ಇವೆ ಎಂದು ಕುಮಾರ್ ಅಭಿಪ್ರಾಯಿಸಿದರು.
ಭಾರತವು ಪ್ರಸಕ್ತ ಚೀನಾದ ಜೊತೆಗೆ 120 ಶತಕೋಟಿ ಡಾಲರ್ ವೌಲ್ಯದ ವ್ಯಾಪಾರವನ್ನು ನಡೆಸುತ್ತಿದೆ ಎಂದರು.

ಲಾಹೋರ್ ಕೈಗಾರಿಕಾ ಹಾಗೂ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕಾಶಿಫ್ ಅನ್ವರ್ ಮಾತನಾಡಿ ಬಾರತ ಮತ್ತು ಪಾಕಿಸ್ತಾನದ ಜೊತೆಗಿನ ಆರ್ಥಿಕ ಬಾಂಧವ್ಯಗಳ ಸುಧಾರಣೆಯು ಒಂದು ಸಂಕೀರ್ಣ ವಿಷಯವಾಗಿದ್ದು, ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಅಂಶಗಳೊಂದಿಗೆ ಅದಕ್ಕೆ ಸ್ಪಂದಿಸಬೇಕಾಗತ್ತದೆ ಎಂದರು.

 ಆದರೆ, ಭಾರತ ಹಾಗೂ ಪಾಕಿಸ್ತಾನದ ನಡುವಿನ ಆರ್ಥಿಕ ಸಂಬಂಧದ ಸುಧಾರಣೆಗೆ ಅತಿ ದೊಡ್ಡ ಹೆಜ್ಜೆಯನ್ನಿಡಬೇಕೆಂಬುದೇ ನಮ್ಮ ಅನಿಸಿಕೆಯಾಗಿದೆ. ಇದರಿಂದಾಗಿ ಉಭಯದೇಶಗಳಿಗೆ ಗಣನೀಯ ಪ್ರಮಾಣದ ಆರ್ಥಿಕ ಪ್ರಯೋಜನಗಳು ದೊರೆಯಲಿವೆ’’ ಎಂದು ಕಾಶಿಫ್ ಅನ್ವರ್ ಆಶಾವಾದ ವ್ಯಕ್ತಪಡಿಸಿದ್ದಾರೆ.

Similar News