ಮಧ್ಯ ಆಫ್ರಿಕಾದಲ್ಲಿ ಚಿನ್ನದ ಗಣಿಗೆ ದಾಳಿ: 9 ಚೀನೀಯರ ಹತ್ಯೆ

Update: 2023-03-20 16:37 GMT

ಬ್ಯಾಂಗ್ವಿ, ಮಾ.20: ಮಧ್ಯ ಆಫ್ರಿಕಾ ಗಣರಾಜ್ಯದಲ್ಲಿ ಚೀನೀಯರು ನಿರ್ವಹಿಸುತ್ತಿರುವ ಚಿನ್ನದ ಗಣಿಯ ಮೇಲೆ ದಾಳಿ ನಡೆಸಿದ ಶಂಕಿತ ಬಂಡುಗೋರರು 9 ಚೀನೀ ಪ್ರಜೆಗಳನ್ನು ಹತ್ಯೆ ಮಾಡಿದ್ದು ಇತರ ಇಬ್ಬರನ್ನು ಗಾಯಗೊಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಕ್ಯಾಮರೂನ್ನ ಗಡಿಭಾಗದಲ್ಲಿರುವ ಪ್ರದೇಶದಿಂದ  ಬಂದೂಕುಧಾರಿಗಳು ಮೂವರು ಚೀನಾದ ಪ್ರಜೆಗಳನ್ನು ಅಪಹರಣ ಮಾಡಿದ  ಕೆಲವೇ ದಿನದಲ್ಲಿ ಈ ಪ್ರಕರಣ ವರದಿಯಾಗಿದೆ. ಅಪಹರಣ ಪ್ರಕರಣದ ಬಳಿಕ ಚೀನಾದ ಹೂಡಿಕೆದಾರರ ಆತಂಕ ದೂರಗೊಳಿಸುವ ಉದ್ದೇಶದಿಂದ ಮಧ್ಯ ಆಫ್ರಿಕಾ ಗಣರಾಜ್ಯದ ಅಧ್ಯಕ್ಷ ಫಾಸ್ತಿನ್ ಅರ್ಚಾಂಗೆ ಚೀನಾಕ್ಕೆ ಭೇಟಿ ನೀಡಿ ಭದ್ರತೆ ಒದಗಿಸುವ ಭರವಸೆ ನೀಡಿದ್ದರು.

ಚಿಂಬೋಲೊ ಚಿನ್ನದ ಗಣಿಯ ಭದ್ರತಾ ಸಿಬಂದಿಯ ಮೇಲೆ ರವಿವಾರ ಬೆಳಿಗ್ಗೆ 5 ಗಂಟೆಗೆ ಗುಂಡಿನ ದಾಳಿ ನಡೆಸಿದ ಬಳಿಕ ಗಣಿ ಪ್ರದೇಶದೊಳಗೆ ಪ್ರವೇಶಿಸಿ ಅಲ್ಲಿ ಕಾರ್ಯನಿರತವಾಗಿದ್ದ ಚೀನೀಯರ ಮೇಲೆ ಆಕ್ರಮಣ ನಡೆಸಿದ್ದಾರೆ. ಈ ಗಣಿ ಇತ್ತೀಚೆಗಷ್ಟೇ ಕಾರ್ಯಾರಂಭ ಮಾಡಿತ್ತು ಎಂದು ಸಮೀಪದ ನಗರ ಬಾಂಬರಿಯ ಮೇಯರ್ ಅಬೆಲ್ ಮತಿಪಟ ಹೇಳಿದ್ದಾರೆ. ದೇಶದ ಪ್ರಜೆಗಳು ಮತ್ತು ಇಲ್ಲಿ ವಾಸಿಸುವ ವಿದೇಶೀಯರನ್ನು ರಕ್ಷಿಸುವ ತನ್ನ ಸಾಮಥ್ರ್ಯವನ್ನು ದೃಢಪಡಿಸಲು ಸರಕಾರಕ್ಕೆ ಕಷ್ಟವಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಪ್ರತಿಕ್ರಿಯಿಸಿದ್ದಾರೆ.

ದಾಳಿಯ ಹೊಣೆಯನ್ನು ತಕ್ಷಣಕ್ಕೆ ಯಾವುದೇ ಸಂಘಟನೆ ವಹಿಸಿಲ್ಲ.  ಆದರೆ ಈ ಪ್ರದೇಶದಲ್ಲಿ ಸಕ್ರಿಯವಾಗಿರುವ ಮತ್ತು ದೇಶದ ಸಶಸ್ತ್ರ ಪಡೆಯ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಬಂಡುಗೋರ ಸಂಘಟನೆಯ ಒಕ್ಕೂಟ ಸಿಪಿಸಿ ಈ ಕೃತ್ಯ ಎಸಗಿದೆ ಎಂದು ಶಂಕಿಸಲಾಗಿದೆ. ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಬೊಝೈರ್ ಜತೆ ಸಿಪಿಸಿ ಸಂಘಟನೆ ಗುರುತಿಸಿಕೊಂಡಿದೆ. 

Similar News