ಶ್ರೀಲಂಕಾಕ್ಕೆ ಷರತ್ತುಬದ್ಧ ಐಎಂಎಫ್ ಸಾಲ ಮಂಜೂರು: ಭ್ರಷ್ಟಾಚಾರ ನಿಯಂತ್ರಣಕ್ಕೆ ಸೂಚನೆ

Update: 2023-03-21 18:02 GMT

ಕೊಲಂಬೊ, ಮಾ.21: ದಿವಾಳಿಯಾದ ಆರ್ಥಿಕತೆಯ ಚೇತರಿಕೆಯ ಹಾದಿಗೆ ಅಡ್ಡಿಯಾಗಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಬೇಕು ಎಂಬ ಷರತ್ತಿನಡಿ ಸೋಮವಾರ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಶ್ರೀಲಂಕಾಕ್ಕೆ 3 ಶತಕೋಟಿ ಡಾಲರ್ ಮೊತ್ತದ  ಆರ್ಥಿಕ ನೆರವನ್ನು ಮಂಜೂರುಗೊಳಿಸಿದೆ.

ಶ್ರೀಲಂಕಾದ ಅತೀ ದೊಡ್ಡ ದ್ವಿಪಕ್ಷೀಯ ಸಾಲದಾತ(ಲೆಂಡರ್) ದೇಶವಾದ ಚೀನಾವು ಸಾಲ ಪರಿಹಾರದ ಭರವಸೆ ಒದಗಿಸಿದ ಬಳಿಕ ಐಎಂಎಫ್ ಈ ಸುದೀರ್ಘಾವಧಿಯಿಂದ ನಿರೀಕ್ಷಿಸಲಾದ ಆರ್ಥಿಕ ನೆರವನ್ನು ಮಂಜೂರುಗೊಳಿಸಿದೆ. ಆದರೆ ದೇಶದ ಅಧಿಕಾರಶಾಹಿಯಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರವನ್ನು ನಿಗ್ರಹಿಸಬೇಕು ಮತ್ತು ಕಳೆದ ವರ್ಷ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾದ ಸಾಲದ ಹಣದ ತಪ್ಪುನಿರ್ವಹಣೆ ಪುನರಾವರ್ತನೆ ಆಗಬಾರದು ಎಂಬ ಷರತ್ತನ್ನು ಮುಂದಿರಿಸಿದೆ.

‘ಕಾರ್ಯಕ್ರಮದ ಕೇಂದ್ರ ಸ್ಥಂಭವಾಗಿರುವ ಭ್ರಷ್ಟಾಚಾರ ನಿಗ್ರಹ ಮತ್ತು ಆಡಳಿತ ಸುಧಾರಣೆಯ ಮಹತ್ವವನ್ನು ನಾವು ಒತ್ತಿಹೇಳಿದ್ದೇವೆ. ಭ್ರಷ್ಟಾಚಾರ ನಿಗ್ರಹಕ್ಕೆ ಕಠಿಣ ಕಾನೂನುಗಳನ್ನು  ಶೀಘ್ರದಲ್ಲೇ ಜಾರಿಗೊಳಿಸುವುದಾಗಿ ಶ್ರೀಲಂಕಾ ಸರಕಾರ ಭರವಸೆ ನೀಡಿದೆ. ಸುಧಾರಣೆಗಳಿಂದ ಕಷ್ಟಪಟ್ಟು ಗಳಿಸಿದ ಪ್ರಯೋಜನವನ್ನು ಶ್ರೀಲಂಕಾದ ಜನತೆಗೆ ಖಾತರಿಪಡಿಸುವಲ್ಲಿ ಅವು ಅನಿವಾರ್ಯವಾಗಿದೆ’ ಎಂದು ಶ್ರೀಲಂಕಾದಲ್ಲಿ ಐಎಂಎಫ್ ನಿಯೋಗದ ಮುಖ್ಯಸ್ಥ ಪೀಟರ್ ಬ್ರುಯೆರ್ ಹೇಳಿದ್ದಾರೆ. 

ಶ್ರೀಲಂಕಾವು ಐಎಂಎಫ್ನಿಂದ ಸಮಗ್ರ ಆಡಳಿತ ವಿಶ್ಲೇಷಣಾತ್ಮಕ ಉಪಕ್ರಮಕ್ಕೆ ಒಳಪಡುವ ಪ್ರಥಮ ಏಶ್ಯಾ ಆರ್ಥಿಕತೆಯಾಗಲಿದೆ ಎಂದವರು ಇದೇ ಸಂದರ್ಭ ಹೇಳಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದ್ವೀಪರಾಷ್ಟ್ರ ಶ್ರೀಲಂಕಾ, ಕಳೆದ ವರ್ಷದ ಎಪ್ರಿಲ್ನಲ್ಲಿ 46 ಶತಕೋಟಿ ಡಾಲರ್ ವಿದೇಶಿ ಸಾಲ ಮರುಪಾವತಿಸದೆ ಡಿಫಾಲ್ಟರ್ ಪಟ್ಟಿಗೆ ಸೇರ್ಪಡೆಗೊಂಡಿತ್ತು. ದೇಶದ ವಿದೇಶಿ ವಿನಿಮಯ ಸಂಗ್ರಹ ಕನಿಷ್ಟ ಮಟ್ಟಕ್ಕೆ ಇಳಿದ ಹಿನ್ನೆಲೆಯಲ್ಲಿ ದೈನಂದಿನ ಅಗತ್ಯದ ವಸ್ತುಗಳ ಆಮದಿಗೂ ಹಣ ಹೊಂದಿಸಲು ಕಷ್ಟವಾಗಿತ್ತು. ಆದ್ದರಿಂದ ಅಂತಿಮ ಆಯ್ಕೆಯಾಗಿ ಅಮೆರಿಕದಲ್ಲಿ ಕೇಂದ್ರ ಕಚೇರಿ ಹೊಂದಿರುವ ಐಎಂಎಫ್ನಿಂದ ಸಾಲದ ನೆರವು ಕೋರಿತ್ತು.

ಶ್ರೀಲಂಕಾದಲ್ಲಿ ಚಾಲ್ತಿಯಲ್ಲಿರುವ ಪ್ರಗತಿಪರ ತೆರಿಗೆ ಸುಧಾರಣೆಗಳ ಆವೇಗವನ್ನು ಕಾಯ್ದುಕೊಳ್ಳುವ ಜತೆಗೆ ಸಾಮಾಜಿಕ ಸುರಕ್ಷಾ ಜಾಲವನ್ನು ಬಲಪಡಿಸಬೇಕು ಮತ್ತು ಬಡವರನ್ನು ಗುರಿಯಾಗಿಸಿದ ಉಪಕ್ರಮಗಳನ್ನು ಜಾರಿಗೊಳಿಸಬೇಕು. ಇದರ ಜತೆಗೆ ಸರಕಾರದ ಹಣಕಾಸು ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಐಎಂಎಫ್ನ ಆಡಳಿತ ನಿರ್ದೇಶಕಿ ಕ್ರಿಸ್ತಲೀನಾ ಜಾರ್ಜಿಯೆವಾ ಸೋಮವಾರ ಹೇಳಿದ್ದರು.
ಶ್ರೀಲಂಕಾದ ಅರ್ಥವ್ಯವಸ್ಥೆ ಕಳೆದ ವರ್ಷ ದಾಖಲೆಯ 7.8% ಮಟ್ಟಕ್ಕೆ ಏರಿತ್ತು. 2026ರ ಅಂತ್ಯದವರೆಗೂ ದೇಶವು ದಿವಾಳಿಯಾಗಿಯೇ ಉಳಿಯುವ ಅಪಾಯವಿದೆ ಎಂದು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಎಚ್ಚರಿಕೆ ನೀಡಿದ್ದರು.

Similar News