ದುಬೈ-ಮುಂಬೈ ಇಂಡಿಗೋ ವಿಮಾನದಲ್ಲಿ ಸಿಬ್ಬಂದಿಗೆ ನಿಂದನೆ: ಇಬ್ಬರು ಪ್ರಯಾಣಿಕರ ಬಂಧನ

Update: 2023-03-23 05:24 GMT

ಮುಂಬೈ: ದುಬೈ-ಮುಂಬೈ ಇಂಡಿಗೋ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಸಿಬ್ಬಂದಿ ಹಾಗೂ  ಸಹ ಪ್ರಯಾಣಿಕರನ್ನು ನಿಂದಿಸಿದ ಆರೋಪದ ಮೇಲೆ ಇಬ್ಬರು ಪ್ರಯಾಣಿಕರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಬುಧವಾರ ಮುಂಬೈನಲ್ಲಿ ವಿಮಾನ ಇಳಿದ ನಂತರ  ಇಬ್ಬರನ್ನು ಬಂಧಿಸಲಾಯಿತು. ಆದರೆ ಅವರಿಗೆ  ನ್ಯಾಯಾಲಯದಿಂದ ಜಾಮೀನು ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

"ಇಬ್ಬರು ಆರೋಪಿಗಳು ಪಾಲ್ಘರ್ ನ ನಾಲಸೋಪಾರ ಹಾಗೂ ಕೊಲ್ಹಾಪುರದವರು, ಇಬ್ಬರು ಗಲ್ಫ್‌ನಲ್ಲಿ ಒಂದು ವರ್ಷ ಕೆಲಸ ಮಾಡಿ ಹಿಂತಿರುಗುತ್ತಿದ್ದರು. ಸುಂಕ ರಹಿತ ಅಂಗಡಿಯಿಂದ ತಂದ ಮದ್ಯವನ್ನು ಸೇವಿಸಿ ವಿಮಾನದೊಳಗೆ ಸಂಭ್ರಮಿಸಿದ್ದರು" ಎಂದು ಅಧಿಕಾರಿ  ಹೇಳಿದರು.

"ಸಹ-ಪ್ರಯಾಣಿಕರು  ಗದ್ದಲಕ್ಕೆ ಆಕ್ಷೇಪಿಸಿದಾಗ ಇಬ್ಬರೂ ನಿಂದಿಸಲಾರಂಭಿಸಿದರು. ಮಧ್ಯಪ್ರವೇಶಿಸಿದ ಸಿಬ್ಬಂದಿಯನ್ನು ನಿಂದಿಸಿದರು. ಸಿಬ್ಬಂದಿ ಅವರ ಮದ್ಯ ಬಾಟಲಿಗಳನ್ನು ಕಸಿದುಕೊಂಡು ಹೋದರು" ಎಂದು ಅಧಿಕಾರಿ ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಇತರರ ಜೀವ ಮತ್ತು ಸುರಕ್ಷತೆಗೆ ಅಪಾಯವನ್ನುಂಟುಮಾಡುವುದಕ್ಕಾಗಿ) ಹಾಗೂ  ವಿಮಾನ ನಿಯಮಗಳ 21,22 ಮತ್ತು 25 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಹರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಈ ವರ್ಷದಲ್ಲಿ ಇದು ಏಳನೇ ಘಟನೆಯಾಗಿದ್ದು, ವಿಮಾನ ಪ್ರಯಾಣಿಕ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ  ಪ್ರಕರಣ ದಾಖಲಿಸಲಾಗಿದೆ.

ಮಾರ್ಚ್ 11 ರಂದು ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದ ಹಾಗೂ  ಲಂಡನ್-ಮುಂಬೈ ವಿಮಾನದ ತುರ್ತು ನಿರ್ಗಮನವನ್ನು ತೆರೆಯಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿತ್ತು.

Similar News