ವಿದೇಶದಲ್ಲಿ ಪುಟಿನ್ ಬಂಧನವೆಂದರೆ ಯುದ್ಧದ ಘೋಷಣೆ: ರಶ್ಯ ಎಚ್ಚರಿಕೆ‌

Update: 2023-03-23 17:17 GMT

ಮಾಸ್ಕೊ, ಮಾ.23: ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ(ಐಸಿಸಿ) ಹೊರಡಿಸಿರುವ ವಾರಂಟಿನಡಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರನ್ನು ವಿದೇಶದಲ್ಲಿ ಬಂಧಿಸಿದರೆ ಅದು ಯುದ್ಧದ ಘೋಷಣೆ ಎಂದು ನಾವು ಅರ್ಥೈಸಲಿದ್ದೇವೆ ಎಂದು ರಶ್ಯದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವಡೆವ್ ಎಚ್ಚರಿಸಿದ್ದಾರೆ.

ಪುಟಿನ್ರನ್ನು ಬಂಧಿಸುವ ಯಾವುದೇ ದೇಶದ ಮೇಲೆ ರಶ್ಯದ ಶಸ್ತ್ರಾಸ್ತ್ರಗಳು ಅಪ್ಪಳಿಸಲಿದೆ ಎಂದವರು ಹೇಳಿದ್ದಾರೆ. ಡಿಮಿಟ್ರಿ ಮೆಡ್ವಡೇವ್ 2008ರಿಂದ 2012ರ ನಡುವಿನ ಅವಧಿಯಲ್ಲಿ ರಶ್ಯದ ಅಧ್ಯಕ್ಷರಾಗಿದ್ದರು. ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ಬಳಿಕ ಉಕ್ರೇನ್ನ ಪ್ರದೇಶದಿಂದ ಮಕ್ಕಳನ್ನು ರಶ್ಯಕ್ಕೆ ಸ್ಥಳಾಂತರಿಸಿದ ಆರೋಪದಲ್ಲಿ ಹೇಗ್ ಮೂಲದ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಪುಟಿನ್ ವಿರುದ್ಧ ಕಳೆದ ವಾರ ಬಂಧನ ವಾರಂಟ್ ಜಾರಿಗೊಳಿಸಿತ್ತು.

`ನಾವು ಹೀಗೆ ಊಹಿಸುವಾ- ಖಂಡಿತಾ ಹೀಗೆ ಆಗಲು ಸಾಧ್ಯವಿಲ್ಲ.  ಪರಮಾಣು ಶಕ್ತ ದೇಶದ ಮುಖಂಡರು(ಪುಟಿನ್) ಒಂದು ದೇಶಕ್ಕೆ, ಉದಾಹರಣೆಗೆ ಜರ್ಮನಿಗೆ ಬಂದಾಗ ಅವರನ್ನು ಬಂಧಿಸುವುದು ಎಂದರೆ ಏನರ್ಥ? ರಶ್ಯ ಗಣರಾಜ್ಯದ ವಿರುದ್ಧ ಯುದ್ಧದ ಘೋಷಣೆ. ಹೀಗೆ ಆದರೆ ನಮ್ಮ ಎಲ್ಲಾ ಯುದ್ಧವಿಮಾನ, ರಾಕೆಟ್, ಕ್ಷಿಪಣಿ ಇತ್ಯಾದಿಗಳು ಜರ್ಮನಿಗೆ, ಅಲ್ಲಿನ ಛಾನ್ಸಲರ್ ಕಚೇರಿಯತ್ತ ಹಾರಲಿವೆ' ಎಂದು ಮೆಡ್ವಡೇವ್ ಹೇಳಿದ್ದಾರೆ. ಮೆಡ್ವಡೇವ್ ಈಗ ರಶ್ಯದ ಭದ್ರತಾ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ. 

ಐಸಿಸಿಯ ನಿರ್ಧಾರವು ಪಶ್ಚಿಮದ ಜತೆಗಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಲಿದೆ ಎಂದವರು ಪ್ರತಿಪಾದಿಸಿದ್ದಾರೆ. ರಶ್ಯದ ಮಕ್ಕಳ ಹಕ್ಕುಗಳ ಆಯೋಗದ ಆಯುಕ್ತೆ ಮರಿಯಾ ಲೊವೋವ-ಬೆಲೋವಾ ವಿರುದ್ಧವೂ ಐಸಿಸಿ ಬಂಧನ ವಾರಂಟ್ ಜಾರಿಗೊಳಿಸಿದೆ. ಈ ಮಧ್ಯೆ, `ಕಾನೂನುಬಾಹಿರ ಆದೇಶ' ಜಾರಿಗೊಳಿಸಿದ  ಐಸಿಸಿಯ ಅಧಿಕಾರಿ ಕರೀಮ್ ಖಾನ್ ವಿರುದ್ಧ ಕ್ರಿಮಿನಲ್ ತನಿಖೆಗೆ ಚಾಲನೆ ನೀಡಲಾಗಿದೆ ಎಂದು ರಶ್ಯ ಹೇಳಿದೆ.

ಅಂತರಾಷ್ಟ್ರೀಯ ನ್ಯಾಯಮಂಡಳಿಯ ಕಾರ್ಯನಿರ್ವಹಣೆಯ ವಿರುದ್ಧದ ಬೆದರಿಕೆ ವಿಷಾದನೀಯವಾಗಿದೆ. ಸಾಮಾನ್ಯ ಅಂತರಾಷ್ಟ್ರೀಯ ಕಾನೂನಿನಡಿ ನಿಷೇಧಿಸಲ್ಪಟ್ಟಿರುವ ಕೃತ್ಯಗಳಿಗೆ ಹೊಣೆಗಾರಿಕೆಯನ್ನು ಖಚಿತಪಡಿಸುವ ಅಂತರಾಷ್ಟ್ರೀಯ ಪ್ರಯತ್ನಗಳನ್ನು ತಡೆಯುವ ಈ ಪ್ರಯತ್ನಗಳಿಗೆ ವಿಷಾದಿಸುತ್ತೇವೆ ಎಂದು ಐಸಿಸಿ ಹೇಳಿದೆ.

Similar News