×
Ad

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ನೀತು, ಸವೀಟಿಗೆ ಚಿನ್ನ

Update: 2023-03-25 22:11 IST

 ಹೊಸದಿಲ್ಲಿ, ಮಾ.25:ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ತೂಕ ವಿಭಾಗದಲ್ಲಿ ಜಯಶಾಲಿಯಾದ ಬಾಕ್ಸರ್‌ಗಳಾದ ನೀತು ಘಂಘಾಸ್ ಹಗೂ ಸವೀಟಿ ಬೂರಾ ವಿಶ್ವ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು.

48 ಕೆಜಿ ವಿಭಾಗದ ಫೈನಲ್‌ನಲ್ಲಿ ನೀತು ಅವರು ಮಂಗೋಲಿಯದ ಲುತ್ಸ್ಸೆೈಖಾನ್ ಅಲ್ತಾತ್ಸೆತ್ಸೆಗ್‌ರನ್ನು 5-0 ಅಂತರದಿಂದ ಮಣಿಸಿ ಚಿನ್ನದ ಪದಕ ಗೆದ್ದುಕೊಂಡರು. ಇದರೊಂದಿಗೆ ಇತಿಹಾಸದ ಪುಸ್ತಕದಲ್ಲಿ ತನ್ನ ಹೆಸರು ನೊಂದಾಯಿಸಿದರು.

ಸವೀಟಿ 81ಕೆಜಿ ವಿಭಾಗದ ಫೈನಲ್‌ನಲ್ಲಿ ಚೀನಾದ ವಾಂಗ್ ಲಿನಾ ವಿರುದ್ಧ 4-3 ಅಂತರದಿಂದ ಜಯ ಸಾಧಿಸಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಗೆದ್ದುಕೊಟ್ಟರು. ಈ ಗೆಲುವಿನೊಂದಿಗೆ ನೀತು ಹಾಗೂ ಸವೀಟಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಜಯಿಸಿದ ಭಾರತದ ಆರನೇ ಹಾಗೂ 7ನೇ ಬಾಕ್ಸರ್(ಪುರುಷರ ಅಥವಾ ಮಹಿಳೆಯರು)ಎನಿಸಿಕೊಂಡಿದ್ದಾರೆ.

ಭಾರತ ಇದೀಗ 12ನೇ ಬಾರಿ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದಂತಾಗಿದೆ. ಲೆಜೆಂಡರಿ ಮೇರಿ ಕೋಮ್ ಒಬ್ಬರೇ ಆರು ಬಾರಿ ಈ ಪ್ರಶಸ್ತಿ ಜಯಿಸಿದ್ದಾರೆ. ಮೇರಿ ಕೋಮ್ ಅವರು 2002, 2005, 2006,2008, 2010 ಹಾಗೂ 2018ರಲ್ಲಿ ಚಿನ್ನ ಜಯಿಸಿದರೆ, ಸರಿತಾ ದೇವಿ(2006), ಜೆನ್ನಿ ಆರ್‌ಎಲ್(2006), ಲೆಖಾ ಕೆಸಿ(2006) ಹಾಗೂ ನಿಖಾತ್ ಝರೀನ್(2022)ವಿಶ್ವ ಪ್ರಶಸ್ತಿ ಜಯಿಸಿದ ಇತರ ಬಾಕ್ಸರ್‌ಗಳಾಗಿದ್ದಾರೆ.

Similar News